ಅಡಿಗೆಯನು ಮಾಡಬೇಕಣ್ಣ

ರಚನೆಕಾರ: ಕನಕದಾಸರು

ವರ್ಗ: ಶ್ರೀಕೃಷ್ಣ

ಅಡಿಗೆಯನು ಮಾಡಬೇಕಣ್ಣ
ನಾನೀಗ ಅಜ್ಞಾನದಡಿಗೆಯನು ಮಾಡಬೇಕಣ್ಣ || ಪ ||

ಅಡಿಗೆಯನ್ನು ಮಾಡಬೇಕು ಮಡಿಸಬೇಕು ಮದಗಳನ್ನು
ಒಡೆಯನಾಜ್ಞೆಯಿಂದ ಒಳ್ಳೆ ಸಡಗರದಲಿ ಮನೆಯ ಸಾರಿಸಿ || ಅ.ಪ ||

ತನ್ನ ಗುರುವ ನೆನೆಯಬೇಕಣ್ಣ
ತನುಭಾವವೆಂಬ ಭಿನ್ನ ಕಲ್ಮಶವಳಿಯಬೇಕಣ್ಣ
ಒನಕೆಯಿಂದ ಕುಟ್ಟಿಕೇರಿ ತನಗೆ ತಾನೆ ಆದ ಕೆಚ್ಚ
ನನುವರಿತು ಇಕ್ಕಬೇಕು ಅರಿವರ್ಗವೆಂಬ ತುಂಟರಳಿಸಿ || ೧ ||

ತತ್ತ್ವಭಾಂಡವ ತೊಳೆಯಬೇಕಣ್ಣ
ಸತ್ಯಾತ್ಮನಾಗಿ ಅರ್ತಿ ಅಕ್ಕಿಯ ಮಥಿಸಬೇಕಣ್ಣ
ಕತ್ತರಿ ಮನವೆಂಬ ಹೊಟ್ಟನು ಎತ್ತಿ ಒಲೆಗೆ ಹಾಕಿ ಇನ್ನು
ಮುತ್ತಿಕೊಂಡಿಹ ಮಮತೆಯನ್ನು ಎತ್ತಿ ಎಸರ ಹಿಂಗಿಸುತಲಿ || ೨ ||

ಜನನ ಸಂಡಿಗೆ ಹುರಿಯಬೇಕಣ್ಣ
ನಿಜವಾಗಿ ನಂತು ತನುವು ತುಪ್ಪವ ಕಾಸಬೇಕಣ್ಣ
ಕನಕಗಿರಿನೆಲೆಯಾದಿಕೇಶವನ ದಾಸನ
ಕನಕನ ಕಟ್ಟಳೆಯೊಳು ನಿಂತು ಸುಖದ ಪಾಕವ ಚಂದದಿ ಸವಿದುಣ್ಣಲಿಕ್ಕೆ || ೩ ||