ಅಕಟಕಟ ಸಂಸಾರವನು

ರಚನೆಕಾರ: ಶ್ರೀಪಾದರಾಜರು

ವರ್ಗ: ಉಪದೇಶಾತ್ಮಕ

ಅಕಟಕಟ ಸಂಸಾರವನು ನೆಚ್ಚಿ ಕೆಡಬ್ಯಾಡ || ಪ ||

ವಿಕಟದಲಿ ಮಾನವರು ಕೆಟ್ಟರೆಲ್ಲರು ನಿಜ || ಅ.ಪ. ||

ಮುನ್ನ ನರಕಾಸುರನು ಬಡಿದು ಚಿಂತಾಮಣಿಯ
ತನ್ನ ಮನೆಯಲಿ ತಂದು ನಿಲ್ಲಿಸಿ ನೃಪರ
ಕನ್ನೆಯರ ಷೋಡಶಸಹಸ್ರವನೆ ತಂದಾತ
ಹೆಣ್ಣನೊಬ್ಬಳನೊಯ್ದುದಿಲ್ಲವೊ ನೋಡೊ || ೧ ||

ಸಾವಿರ ಕರ ಪಡೆದ ಕಾರ್ತವೀರ್ಯಾರ್ಜುನನು
ಭೂವಲಯದೊಳಗೇ ವೀರನೆನಿಸಿ
ರಾವಣನ ಸೆರೆಯಿಟ್ಟು ಕಾಮಧೇನುವ ಬಯಸಿ
ಸಾವಾಗ ಏನು ಕೊಂಡೊಯ್ದನೋ ನೋಡೊ || ೨ ||

ಕೌರವನು ಧರೆಯೆಲ್ಲ ತನಗಾಗಬೇಕೆಂದು
ವೀರಪಾಂಡವರೊಡನೆ ಕದನಮಾಡಿ
ಮಾರಿಯ ವಶವೈದಿ ಹೋಹಾಗ ತನ್ನೊಡನೆ
ಶ್ಯಾರೆ ಭೂಮಿಯ ಒಯ್ದುದಿಲ್ಲವೊ ನೋಡೊ || ೩ ||

ವರಯಜ್ಞಗಳ ಮಾಡಿ ನಹುಷ ಸುರಪತಿಯೆನಿಸಿ
ಪರಮಮುನಿಗಳ ಕೈಲೆ ದಂಡಿಗೆಯ ಹೊರಿಸಿ
ಉರಗಜನುಮವನೈದಿ ಹೋಹಾಗ ತನ್ನೊಡನೆ
ಸುರಲೋಕದೊಳಗೇನ ಕೊಂಡ್ಹೋದ ನೋಡೊ || ೪ ||

ತುಂಗಗುಣ ಧ್ರುವ ವಿಭೀಷಣ ಹನುಮಾದಿಗಳು
ಮಂಗಳಾತ್ಮಕ ಹರಿಯನರಿತು ಭಜಿಸಿ
ಭಂಗವಿಲ್ಲದೆ ಹೊರೆದರೈ ಸಕಲ ಭಾಗ್ಯವನು
ರಂಗವಿಠಲರೇಯನ ನೆರೆ ನಂಬಿರೋ || ೫ ||