ಅಂಬೆಗಾಲಿಕ್ಕುತಲಿ ಬಂದ

ರಚನೆಕಾರ: ಪುರಂದರದಾಸರು

ವರ್ಗ: ಶ್ರೀಕೃಷ್ಣ

ಅಂಬೆಗಾಲಿಕ್ಕುತಲಿ ಬಂದ ಗೋವಿಂದ || ಪ ||

ಅಂಬುಜನಾಭನು ದಯದಿಂದ ಎನ್ನ ಮನೆಗೆ || ಅ.ಪ ||

ಜಲಚರ ಜಲವಾಸ ಧರಣಿಧರ ಮೃಗರೂಪ
ನೆಲನಳೆದು ಮೂರಡಿ ಮಾಡಿ ಬಂದ
ಕುಲನಾಶ ವನಮಾಲಿ ನವನೀತ ಚೋರನಿವ
ಲಲನೆಯರ ವ್ರತಭಂಗ ವಾಹನತುರಂಗ || ೧ ||

ಕಣ್ಣು ಬಿಡುವನು ತನ್ನ ಬೆನ್ನ ತಗ್ಗಿಸುವನು
ಮಣ್ಣು ಕೊರೆದು ಕೋರೆ ಬಾಯ ತೆರೆದು
ಚಿಣ್ಣ ಭಾರ್ಗವ ಲಕ್ಷ್ಮಣಣ್ಣ ಬೆಣ್ಣೆಯ ಕಳ್ಳ
ಮನವನ ಬಿಟ್ಟು ಕುದುರೆಯನೇರಿದ || ೨ ||

ನೀರಪೊಕ್ಕನು ಗಿರಿಯ ನೆಗಹಿ ಧರಣಿಯ ತಂದು
ನರಮೃಗ ಬಲಿಬಂದ ಕೊರಳುಗೊಯಿಕ
ಶರಮುರಿದೊರಳೆಳೆದು ನಿರವಾಣಿ ಹಯಹತ್ತಿ
ಪುರಂದರ ವಿಠ್ಠಲ ಮನೆಗೆ ತಾ ಬಂದ || ೩ ||