ಅಂಬಿಗಾ ನಾ ನಿನ್ನ ನಂಬಿದೆ

ರಚನೆಕಾರ: ಪುರಂದರದಾಸರು

ವರ್ಗ: ವಿಷ್ಣು

ಅಂಬಿಗಾ ನಾ ನಿನ್ನ ನಂಬಿದೆ
ಜಗದಂಬಾರಮಣ ನಿನ್ನ ನಂಬಿದೆ || ಪ ||

ತುಂಬಿದ ಹರಿಗೋಲಂಬಿಗಾ
ಅದಕೊಂಭತ್ತು ಛಿದ್ರ ನೋಡಂಬಿಗಾ
ಸಂಭ್ರಮದಿಂದ ನೀನಂಬಿಗಾ
ಅದರಿಂಬು ನೋಡಿ ನಡೆಸಂಬಿಗಾ || ೧ ||

ಹೊಳೆಯ ಅಬ್ಬರ ನೋಡಂಬಿಗಾ
ಅದಕ್ಕೆ ಸೆಳವು ಘನವಯ್ಯ ಅಂಬಿಗಾ
ಸುಳಿಯೊಳು ಮುಳುಗಿದೆ ಅಂಬಿಗಾ
ಎನ್ನ ಸೆಳೆದು ಕೊಂಡೊಯ್ಯೊ ನೀನಂಬಿಗಾ || ೨ ||

ಆರು ತೆರೆಯ ನೋಡಂಬಿಗಾ
ಅದು ಮೀರಿ ಬರುತಲಿದೆ ಅಂಬಿಗಾ
ಯಾರಿಂದಲಾಗದು ಅಂಬಿಗಾ
ಅದ ನಿವಾರಿಸಿ ದಾಟಿಸೊ ಅಂಬಿಗಾ || ೩ ||

ಹೊತ್ತುಹೋಯಿತು ನೋಡಂಬಿಗಾ
ಅಲ್ಲಿ ಮತ್ತೈವರೀರ್ವರು ಅಂಬಿಗಾ
ಒತ್ತಿ ನಡೆಸು ನೋಡಿ ಅಂಬಿಗಾ
ಎನ್ನ ಸತ್ಯಲೋಕಕೆ ಒಯ್ಯೊ ಅಂಬಿಗಾ || ೪ ||

ಸತ್ಯವೆಂಬುದೆ ಹುಟ್ಟಂಬಿಗಾ
ಸದಾ ಭಕ್ತಿ ಎಂಬುದೆ ಪಥವಂಬಿಗಾ
ಮುಕ್ತಿದಾಯಕ ನಮ್ಮ ಪುರಂದರ ವಿಠಲ
ಮುಕ್ತಿಮಂಟಪಕೊಯ್ಯೊ ಅಂಬಿಗಾ || ೫ ||