ಆರಿಗಾದರೂ ಪೂರ್ವ ಕರ್ಮ ಬಿಡದು

ರಚನೆಕಾರ: ಕನಕದಾಸರು

ವರ್ಗ: ಉಪದೇಶಾತ್ಮಕ

ಆರಿಗಾದರೂ ಪೂರ್ವ ಕರ್ಮ ಬಿಡದು, ಅಜ
ಹರ ಸುರ ಮುನಿಗಳ ಕಾಡುತಿಹುದು || ಪ ||

ವೀರ ಭೈರವನಂತೆ ತಾನು ಬತ್ತಲೆಯಂತೆ
ಮಾರಿ ಮಸಣಿಗಳಂತೆ ಕೂಳನ್ನು ತಿಂಬರಂತೆ
ಸೂರ್ಯ ಚಂದ್ರಮರಂತೆ ರಾಹುವಟ್ಟುಳಿಯಂತೆ
ಮೂರೆರಡು ತಲೆ ಹರಗೆ ಕೈಯೊಳು ಕರ್ಪರವಂತೆ || ೧ ||

ಶಿಷ್ಟ ಹರಿಶ್ಚಂದ್ರಗೆ ಮಸಣದಡಿಗೆಯು ಅಂತೆ
ಸೃಷ್ಟಿಸುವ ಬೊಮ್ಮನಿಗೆ ಶಿರವು ತಾ ಹೋಯಿತಂತೆ
ಅಷ್ಟ ದಿಕ್ಪಾಲಕರು ಸೆರೆಯಾಗಿರುವರಂತೆ
ಕಟ್ಟುಗ್ರದಿಂದ ಇಂದ್ರನಿಗೆ ಮೈಯೆಲ್ಲ ಕಣ್ಣಂತೆ || ೨ ||

ಹನ್ನೊಂದಕ್ಷೋಹಿಣಿ ಬಲವುಳ್ಳ ಕೌರವನು
ರಣದೊಳಗೆ ತೊಡೆ ಮುರಿದು ಬಿದ್ದು ತಾನಿಹನಂತೆ
ವನಜಾಕ್ಷ ಸಿರಿಯರಸ ಬಲಿಯ ಬೇಡಿದನಂತೆ
ವನಿತೆ ಆ ಧರ್ಮಜನ ತಾಯಿ ತಿರಿದುಂಬಳಂತೆ || ೩ ||

ಧರೆಗೆ ಧರ್ಮಜನಂತೆ ಕಂಕ ಭಟ್ಟನು ಅಂತೆ
ಶೂರ ಭೀಮನು ತಾನು ಬಾಣಸಿಗನಾದಂತೆ
ವೀರ ಫಲುಗುಣನಂತೆ ಕೈಯೊಳಗೆ ಬಳೆಯಂತೆ
ಕಿರಿ ನಕುಲ ಸಹದೇವ ತುರುಗಳನು ಕಾಯ್ದರಂತೆ || ೪ ||

ಹರನ ವಾಹನವಂತೆ ಹುಲ್ಲು ಹೊರುವನಂತೆ
ವಿರಿಂಚಿ ವಾಹನವಂತೆ ಕಮಲ ಭಕ್ಷಿಪನಂತೆ
ಹರಿಯ ಹೊತ್ತಿಹನಂತೆ ಹಾವು ಭಕ್ಷಿಪನಂತೆ
ನೆರೆಯಾದಿಕೇಶವನು ತಾ ಬೆಣ್ಣೆಗಳ್ಳನಂತೆ || ೫ ||