ಆರು ಹಿತವರು ಎಂದು ನಂಬಬೇಡ

ರಚನೆಕಾರ: ಕನಕದಾಸರು

ವರ್ಗ: ಉಪದೇಶಾತ್ಮಕ

ಆರು ಹಿತವರು ಎಂದು ನಂಬಬೇಡ || ಪ ||

ಯಾರಿಗ್ಯಾರಿಲ್ಲ ಆಪತ್ತು ಬಂದೊದಗಿದಡೆ || ಅ.ಪ. ||

ಜನಕ ಹಿತದವನೆಂದು ನಂಬಬಹುದೇ ಹಿಂದೆ
ತನಯ ಪ್ರಹ್ಲಾದನಿಗೆ ಪಿತ ಮುನಿದನು
ಜನನಿಯೇ ರಕ್ಷಿಪಳೆಂತೆಂಬೆನೆ ಆ ಕುಂತಿ
ತನಯ ರಾಧೇಯನಿಗೆ ಎರಡೆಣಿಸಿದ ಮೇಲೆ || ೧ ||

ಮಗನು ತೆತ್ತಿಗನೆನಲು ಕಂಸ ತನ್ನಯ ಪಿತನ
ವಿಗಡ ಬಂಧನದಿಂದ ಬಂಧಿಸಿದನು
ಜಗವರಿಯೇ ಸೋದರನು ಮಮತೆಯುಳ್ಳವನೆನಲು
ಹಗೆವರಸಿ ವಾಲಿಯನು ಅನುಜ ಕೊಲಿಸಿದ ಮೇಲೆ || ೨ ||

ತನಗೆ ದೇಹಾನುಬಂಧುಗಳೇ ಬಂಧುಗಳೆಂದು
ಮನದಿ ನಿಶ್ಚಯವಾಗಿ ನಂಬಬೇಡ
ಘನಕೃಪಾನಿಧಿ ಕಾಗಿನೆಲೆಯಾದಿಕೇಶವ
ಅನುದಿನ ನಂಬಿದವಗಿಹಪರದಿ ಸುಖವು || ೩ ||