ಆವ ಕುಲವೋ ರಂಗಾ

ರಚನೆಕಾರ: ವಾದಿರಾಜ ತೀರ್ಥರು

ವರ್ಗ: ಶ್ರೀಕೃಷ್ಣ

ಆವ ಕುಲವೋ ರಂಗಾ
ಅರಿಯಲಾಗದು || ಪ ||

ಆವ ಕುಲವೆಂದರಿಯಲಾಗದು
ಗೋವ ಕಾಯ್ವ ಗೊಲ್ಲನಂತೆ
ದೇವಲೋಕದ ಪಾರಿಜಾತವು
ಹೂವ ಸತಿಗೆ ತಂದನಂತೆ || ಅ.ಪ ||

ಗೋಕುಲದಲ್ಲಿ ಹುಟ್ಟಿದನಂತೆ
ಗೋವುಗಳನ್ನು ಕಾಯ್ದನಂತೆ |
ಕೊಳಲನೂದಿ ಮೃಗಪಕ್ಷಿಗಳ
ಮರಳು ಮಾಡಿದನಂತೆ |
ತರಳತನದಿ ವರಳ ನೆಗಹಿ
ಮರವ ಮುರಿದು ಮತ್ತೆ ಹಾರಿ |
ತೆರೆದು ಬಾಯೊಳಗಿರೇಳು ಲೋಕವ
ಇರಿಸಿ ತಾಯಿಗೆ ತೋರ್ದನಂತೆ || ೧ ||

ಗೊಲ್ಲತಿಯರ ಮನೆಗೆ ಪೊಕ್ಕು
ಕಳ್ಳತನವ ಮಾಡಿದನಂತೆ |
ಒಲ್ಲದ ಪೂತನಿಯ ವಿಷವನುಂಡು
ಮೆಲ್ಲನೆ ತೃಣನ ಕೊಂದನಂತೆ |
ಪಕ್ಷಿ ತನ್ನ ವಾಹನವಂತೆ
ಹಾವು ತನ್ನ ಹಾಸಿಗೆಯಂತೆ |
ಮುಕ್ಕಣ್ಣ ತನ್ನ ಮೊಮ್ಮಗನಂತೆ
ಮುದ್ದುಮುಖದ ಚೆಲ್ವನಂತೆ || ೨ ||

ಕರಡಿ ಮಗಳ ತಂದನಂತೆ
ಶರಧಿ ಮಗಳು ಮಡದಿಯಂತೆ |
ಧರಣಿಯನ್ನು ಬೇಡಿದನಂತೆ
ಈರೇಳು ಲೋಕದ ಒಡೆಯನಂತೆ |
ಹಡಗಿನಿಂದಲಿ ಬಂದನಂತೆ
ಕಡಲದಡೆಯಲಿ ನಿಂದನಂತೆ |
ಒಡನೆ ಮಧ್ವರಿಗೊಲಿದನಂತೆ
ಒಡೆಯ ಹಯವದನನಂತೆ || ೩ ||