ಬದುಕಿದೆನು ಬದುಕಿದೆನು

ರಚನೆಕಾರ: ಕನಕದಾಸರು

ವರ್ಗ: ವಿಷ್ಣು

ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು
ಪದುಮನಾಭನ ಪಾದದೊಲುಮೆ ಎನಗಾಯಿತು || ಪ ||

ಹರಿತೀರ್ಥ ಪ್ರಸಾದ ಎನ್ನ ಜಿಹ್ವೆಗೊದಗಿತು
ಹರಿಯ ನಾಮಾಮೃತ ಕಿವಿಗೊದಗಿತು
ಹರಿಯ ದಾಸರು ಎನ್ನ ಬಂಧು ಬಳಗವಾದರು
ಹರಿಯ ಶ್ರೀಮುದ್ರೆ ಆಭರಣವಾಯ್ತು || ೧ ||

ಮುಕುತರಾದರು ಎನ್ನ ನೂರೊಂದು ಕುಲದವರು
ಮುಕುತಿ ಮಾರ್ಗಕೆ ಯೋಗ್ಯ ನಾನಾದೆನೊ
ಅಕಳಂಕ ಶ್ರೀಹರಿ ಭಕುತಿಗೆನ್ನ ಮನ ಬೆಳೆದು
ರುಕುಮಿಣಿಯರಸ ಕೈವಶನಾದನೆನಗೆ || ೨ ||

ಇಂದೆನ್ನ ಜೀವಕ್ಕು ಸಕಲ ಸಂಪದವಾಯ್ತು
ಮುಂದೆನ್ನ ಜನ್ಮ ಸಫಲವಾಯಿತು
ತಂದೆ ಶ್ರೀ ಕಾಗಿನೆಲೆಯಾದಿಕೇಶವರಾಯ
ಬಂದೆನ್ನ ಹೃದಯದಲಿ ನೆಲೆಯಾಗಿ ನಿಂತ || ೩ ||