ಬಂದಾ ಮನ್ಮಾನಸಕೆ ಶ್ರೀಹರಿ

ರಚನೆಕಾರ: ಕಲ್ಲೂರು ಸುಬ್ಬಣ್ಣದಾಸರು

ಗಾಯನ: ಯು ಶಾಂತ

ವರ್ಗ: ವಿಷ್ಣು

ಬಂದಾ ಮನ್ಮಾನಸಕೆ ಶ್ರೀಹರಿ || ಪ ||
ಇಂದಿರೆರಮಣ ಮುಕುಂದ ಆನಂದದಿ || ಅ.ಪ ||

ಥಳಥಳಿಸುವ ನವರತ್ನ ಕಿರೀಟವು |
ಹೊಳೆವ ಮಕರಕುಂಡಲ ಧ್ವಜವು ||
ತುಲಸಿಮಾಲೆ ವನಮಾಲೆ ಇಂದೊಪ್ಪುವ |
ಬಲು ತೇಜಸ್ವಿಗೆ ತೇಜೋಮಯನಾದ ಹರಿ || ೧ ||

ಲಲನೆ ರುಕ್ಮಿಣಿ ಸತ್ಯಭಾಮೆಯಿಂದೊಡಗೂಡಿ |
ನಲಿದಾಡುತ ಎನ್ನ ಹೃದಯದಲಿ ||
ಬಲುಬಲು ವಿಧದ ಅಜ್ಞಾನಾಂಧಕಾರದಿ |
ಕುಲವನೋಡಿರಿ ಮಧ್ಕುಲ ದೈವಮೂರುತಿಯ || ೨ ||

ಎಷ್ಟು ಜನುಮದ ಪುಣ್ಯ ಬಂದೊದಗಿತೋ |
ಎಷ್ಟು ಧನ್ಯರೋ ನಮ್ಮ ಹಿರಿಯರು ||
ಎಷ್ಟು ದೇವತೆಗಳು ನಮಗೆ ಹರಸಿದರೋ |
ದೃಷ್ಟಿಗೋಚರ ನಮ್ಮ ವ್ಯಾಸವಿಠ್ಠಲ ಬಲ್ಲ || ೩ ||