ಬಂದೆವಯ್ಯ ಗೋವಿಂದಶೆಟ್ಟಿ

ರಚನೆಕಾರ: ಕನಕದಾಸರು

ವರ್ಗ: ಶ್ರೀನಿವಾಸ

ಬಂದೆವಯ್ಯ ಗೋವಿಂದಶೆಟ್ಟಿ – ನಿಮ್ಮ
ಹರಿವಾಣ ತೀರ್ಥಪ್ರಸಾದ ಉಂಟೆನಲಾಗಿ || ಪ ||

ಅಪ್ಪವು ಅತಿರಸ ತುಪ್ಪವು ಚಿನಿಪಾಲು
ಒಪ್ಪುವ ಸಕ್ಕರೆ ಯಾಲಕ್ಕಿಯು
ಅಪರೂಪವಾದ ಕಜ್ಜಾಯಗಳನೆಲ್ಲ
ಛಪ್ಪನ್ನ ದೇಶಕ್ಕೆ ಮಾರುವ ಶೆಟ್ಟಿ || ೧ ||

ಒಡೆದ ಮಡಕೆ ತಂದು ಇಡಿದು ನಾಮವ ಮಾಡಿ
ಕೊಡುವೆ ನೀ ಕಾಸಿಗೆ ಒಂದೊಂದನು
ಒಡಲು ತುಂಬಿ ಮಿಕ್ಕ ಅನ್ನವ ಮಾರಿಸಿ
ಒಡವೆಯ ಗಳಿಸುವ ಕಡುಲೋಭಿ ಶೆಟ್ಟಿ || ೨ ||

ಶೇಷಗಿರಿಯಲ್ಲಿ ವಾಸ ಮಾಡಿಕೊಂಡು
ದೇಶದೇಶಕ್ಕೆ ಹೆಸರಾದ ಶೆಟ್ಟಿ
ಕಾಸುಕಾಸಿಗೆ ಬಡ್ಡಿ ಗಳಿಸಿಕೊಂಬ
ಆದಿಕೇಶವ ನಾರಾಯಣ ತಿಮ್ಮಶೆಟ್ಟಿ || ೩ ||