ಬಾರೋ ಮನೆಗೆ ಗೋವಿಂದ

ರಚನೆಕಾರ: ಶ್ರೀಪಾದರಾಜರು

ವರ್ಗ: ಶ್ರೀಕೃಷ್ಣ

ಬಾರೋ ಮನೆಗೆ ಗೋವಿಂದ - ನಿನ್ನಂಘ್ರಿಕಮಲವ
ತೋರೋ ಎನಗೆ ಮುಕುಂದ ನಲಿದಾಡು ಮನದಲಿ
ಮಾರಪಿತ ಆನಂದನಂದನ್ನ ಕಂದ || ಪ ||

ಚಾರುತರ ಶರೀರ ಕರುಣಾ-
ವಾರಿನಿಧಿ ಭವ ಘೋರನಾಶನ
ವಾರಿಜಾಸನ ವಂದ್ಯ ನಿರಜ
ಸಾರ ಸದ್ಗುಣ ಹೇ ರಮಾಪತೆ || ಅ.ಪ. ||

ನೋಡೋ ದಯದಿಂದೆನ್ನ, ಕರಪದುಮ ಶಿರದಲಿ
ನೀಡೋ ಭಕ್ತಪ್ರಸನ್ನ, ನಲಿದಾಡೊ ಮನದಲಿ
ಬೇಡಿಕೊಂಬೆನೊ ನಿನ್ನ, ಆನಂದ ಘನ್ನ
ಮಾಡದಿರು ಅನುಮಾನವ, ಕೊಂ-
ಡಾಡುವೆನು ತವ ಪಾದಮಹಿಮೆಗಳನು
ಜೋಡಿಸುವೆ ಕರಗಳನು ಚರಣಕೆ
ಕೂಡಿಸೊ ತವ ದಾಸಜನರೊಳು || ೧ ||

ಹೇಸಿ ವಿಷಯಗಳಲ್ಲಿ ತೊಳಲಾಡಿ ನಾ ಬಲು
ಕ್ಲೇಶ ಪಡುವುದು ಬಲ್ಲಿ, ಘನ ಯುವತಿಯರ ಸುಖ
ಲೇಸು ಎಂಬುದನು ಕೊಲ್ಲಿ, ಆಸೆ ಬಿಡಿಸಿಲ್ಲಿ
ಏಸು ಜನುಮದ ದೋಷದಿಂದಲಿ
ಈಸುವೆನು ಇದರೊಳಗೆ, ಇಂದಿಗೆ
ಮೋಸವಾಯಿತು ಆದುದಾಗಲಿ
ಶ್ರೀಶ ನೀ ಕೈಪಿಡಿದು ರಕ್ಷಿಸು || ೨ ||

ನೀನೆ ಗತಿಯೆನಗಿಂದು ಉದ್ಧರಿಸೊ ಬ್ಯಾಗನೆ
ದೀನ ಜನರಿಗೆ ಬಂಧು – ನಾ ನಿನ್ನ ಸೇವಕ
ಶ್ರೀನಿವಾಸ ಎಂದೆಂದು ಕಾರುಣ್ಯ ಸಿಂಧು
ಪ್ರಾಣಪತಿ ಹೃದಯಾಬ್ಜ ಮಂಟಪ-
ಸ್ಥಾನದೊಳಗಭಿವ್ಯಾಪ್ತ ಚಿನ್ಮಯ
ಧ್ಯಾನಗೋಚರನಾಗಿ ಕಣ್ಣಿಗೆ
ಕಾಣಿಸುವೆ ಶ್ರೀರಂಗವಿಠಲ || ೩ ||