ಬಾಯಿ ನಾರಿದ ಮೇಲೆ

ರಚನೆಕಾರ: ಕನಕದಾಸರು

ವರ್ಗ: ಉಪದೇಶಾತ್ಮಕ

ಬಾಯಿ ನಾರಿದ ಮೇಲೆ ಏಕಾಂತವೆ
ತಾಯಿ ತೀರಿದ ಮೇಲೆ ತವರಾಸೆಯೆ || ಪ ||

ಕಣ್ಣು ಕೆಟ್ಟ ಮೇಲೆ ಕಡುರೂಪ ಚೆಲ್ವಿಕೆಯೆ
ಬಣ್ಣಗುಂದಿದ ಮೇಲೆ ಬಹುಮಾನವೆ
ಪುಣ್ಯತೀರಿದ ಮೇಲೆ ಪರಲೋಕ ಸಾಧನವೆ
ಸುಣ್ಣವಿಲ್ಲದ ವೀಳ್ಯವದು ಸ್ವಾದುಮಯವೆ || ೧ ||

ಕಿಲುಬಿನ ಬಟ್ಟಲೊಳು ಹುಳಿ ಕಲಸಿ ಉಣಬಹುದೆ
ಚಳಿಯುರಿಗೆ ಚಂದನದ ಲೇಪ ಹಿತವೆ
ಮೊಲೆಬಿದ್ದ ಹೆಣ್ಣಿನೊಳು ಮೋಹಕ್ಕೆ ಸೊಗಸಹುದೆ
ಬೆಲೆಬಿದ್ದ ಸರಕಿನೊಳು ಲಾಭವುಂಟೆ || ೨ ||

ಪಥ್ಯ ಸೇರದ ಮೇಲೆ ನಿತ್ಯಸುಖವೆನಬಹುದೆ
ಸತ್ತ್ವ ತಗ್ಗಿದ ಮೇಲೆ ಸಾಮರ್ಥ್ಯವೆ
ಪೃಥ್ವಿಯೊಳು ಕಾಗಿನೆಲೆಯಾದಿಕೇಶವ ನಿನ್ನ
ಭಕ್ತಿಯಿಲ್ಲದ ನರಗೆ ಮುಕ್ತಿಯುಂಟೆ? || ೩ ||