ಭಕ್ತಿ ಬೇಕು ವಿರಕ್ತಿ ಬೇಕು

ರಚನೆಕಾರ: ಶ್ರೀಪಾದರಾಜರು

ವರ್ಗ: ಉಪದೇಶಾತ್ಮಕ

ಭಕ್ತಿ ಬೇಕು ವಿರಕ್ತಿ ಬೇಕು ಸರ್ವ-
ಶಕ್ತಿ ಬೇಕು ಮುಕ್ತಿಯ ಬಯಸುವಗೆ || ಪ ||

ಸತಿ ಅನುಕೂಲ ಬೇಕು ಸುತನಲಿ ಗುಣಬೇಕು
ಮತಿವಂತನಾಗಬೇಕು ಮತ ಒಂದಾಗಿರಬೇಕು || ೧ ||

ಜಪದ ಜಾಣುವೆ ಬೇಕು ತಪದ ನೇಮವೆ ಬೇಕು
ಉಪವಾಸ ವ್ರತ ಬೇಕು ಉಪಶಾಂತವಾಗಿರಬೇಕು || ೨ ||

ಸುಸಂಗ ಹಿಡಿಯಲಿಬೇಕು ದುಸ್ಸಂಗ ಬಿಡಲಿಬೇಕು
ರಂಗವಿಠಲನ್ನ ಬಿಡದೆ ನೆರೆ ನಂಬಿರಬೇಕು || ೩ ||