ಭೂಷಣಕೆ ಭೂಷಣ

ರಚನೆಕಾರ: ಶ್ರೀಪಾದರಾಜರು

ವರ್ಗ: ಶ್ರೀಕೃಷ್ಣ

ಭೂಷಣಕೆ ಭೂಷಣ ಇದು ಭೂಷಣ
ಶೇಷಗಿರಿವಾಸ ಶ್ರೀ ವರವೆಂಕಟೇಶ || ಪ ||

ನಾಲಿಗ್ಗೆ ಭೂಷಣ ನಾರಾಯಣ ನಾಮ
ಕಾಲಿಗೆ ಭೂಷಣ ಹರಿಯಾತ್ರೆಯು
ಆಲಯಕೆ ಭೂಷಣ ತುಲಸಿ ವೃಂದಾವನ
ವಿಶಾಲ ಕರ್ಣಕೆ ಭೂಷಣ ವಿಷ್ಣುಕಥೆಯು || ೧ ||

ದಾನವೇ ಭೂಷಣ ಇರುವ ಹಸ್ತಂಗಳಿಗೆ
ಮಾನವೇ ಭೂಷಣ ಮಾನವರಿಗೆ
ಜ್ಞಾನವೇ ಭೂಷಣ ಮುನಿಯೋಗಿವರರಿಗೆ
ಮಾನಿನಿಗೆ ಭೂಷಣ ಪತಿಭಕ್ತಿಯು || ೨ ||

ರಂಗನನು ನೋಡುವುದೇ ಕಂಗಳಿಗೆ ಭೂಷಣ
ಮಂಗಳಾಂಗಗೆ ಮಣಿವ ಶಿರ ಭೂಷಣ
ಶೃಂಗಾರ ತುಲಸಿ ಮಣಿ ಕೊರಳಿಗೆ ಭೂಷಣ
ರಂಗವಿಠಲ ನಿಮ್ಮ ನಾಮ ಅತಿ ಭೂಷಣ || ೩ ||