ದಾಸದಾಸರ ಮನೆಯ ದಾಸಾನುದಾಸ

ರಚನೆಕಾರ: ಕನಕದಾಸರು

ವರ್ಗ: ಉಪದೇಶಾತ್ಮಕ

ದಾಸದಾಸರ ಮನೆಯ ದಾಸಾನುದಾಸ ನಾನು
ಶ್ರೀಶ ಶ್ರೀರಂಗ ನಿಮ್ಮ ಮನೆಯ ದಾಸ || ಪ ||

ಶಂಕುದಾಸರ ಮನೆಯ ಮಂಕುದಾಸನು ನಾನಯ್ಯ
ಮಂಕುದಾಸನು ನಾನು ಮರುಳದಾಸ
ಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ
ಬಿಂಕದ ಬಾಗಿಲ ಕಾಯ್ವ ಬಡದಾಸ ನಾನು || ೧ ||

ಕಾಳಿದಾಸರ ಮನೆಯ ಕೀಳುದಾಸನು ನಾನಯ್ಯ
ಆಳುದಾಸನು ನಾನು ಮೂಳದಾಸ
ಫಾಲಾಕ್ಷಸಖ ನಿನ್ನ ಭಜಿಪ ಭಕ್ತರ ಮನೆಯ
ಆಳಿನಾಳಿನ ದಾಸನಡಿದಾಸ ನಾನಯ್ಯ || ೨ ||

ಹಲವು ದಾಸರ ಮನೆಯ ಹೊಲೆದಾಸ ನಾನಯ್ಯ
ಕುಲವಿಲ್ಲದ ದಾಸ ಕುರುಬದಾಸ
ಛಲದಿ ನಿನ್ನ ಭಜಿಸುವವರ ಮನೆಯ ಮಾದಿಗದಾಸ
ಸಲೆ ಮುಕ್ತಿ ಪಾಲಿಸೆನ್ನೊಡೆಯ ಆದಿಕೇಶವರಾಯ || ೩ ||