ದಾಸರಾಯ ಪುರಂದರ ದಾಸರಾಯ

ರಚನೆಕಾರ: ಜಗನ್ನಾಥದಾಸರು

ವರ್ಗ: ಗುರು ಕೀರ್ತನೆ

ದಾಸರಾಯ ಪುರಂದರ ದಾಸರಾಯ || ಪ ||

ದಾಸರಾಯ ಪ್ರತಿವಾಸರದಲಿ ಶ್ರೀನಿವಾಸನ್ನ
ತೋರೋ ದಯಾಸಾಂದ್ರ || ಅ.ಪ ||

ವರದನಾಮಕ ಭೂಸುರನ ಮಡದಿ ಬಸಿರಲಿ
ಜನಿಸಿ ಬಂದು ಮೆರೆದೆ ಧರಣಿಯೊಳು || ೧ ||

ಕುಲಿಶಧರಾಹ್ವಯ ಪೊಳಲೊಳು ಮಡದಿ
ಮಕ್ಕಳ ಕೂಡಿ ಸುಖದಿ ಕೆಲ ಕಾಲದಲಿದ್ಯೊ || ೨ ||

ವ್ಯಾಸರಾಯರಲಿ ಭಾಸುರ ಮಂತ್ರೋಪದೇಶವ
ಕೊಂಡು ರಮೇಶನ ಒಲಿಸಿದ್ಯೊ || ೩ ||

ಮನೆ ಧನ ಧಾನ್ಯ ವಾಹನ ವಸ್ತುಗಳನೆಲ್ಲ
ತೃಣಕೆ ಬಗೆದು ಕೃಷ್ಣಾರ್ಪಣವೆಂದೆ ಬುಧರಿಗೆ || ೪ ||

ಪ್ರಾಕೃತ ಭಾಷೆಯೊಳ್ ನೀ ಕೃತಿ ಪೇಳಿ ಆ
ಪ್ರಾಕೃತ ಹರಿಯಿಂದ ಸ್ವೀಕೃತ ನೀನಾದ್ಯೊ || ೫ ||

ತೀರ್ಥಕ್ಷೇತ್ರಗಳ ಮೂರ್ತಿ ಮಹಿಮೆಗಳ
ಕೀರ್ತಿಸಿ ಜಗದಿ ಕೃತಾರ್ಥನೆಂದೆನಿಸಿದೆ || ೬ ||

ಪಾತಕ ವನಧಿ ಪೋತನೆನಿಪ ಜಗ
ನ್ನಾಥ ವಿಠ್ಠಲನ ಸುಪ್ರೀತಿಯಿಂದೊಲಿಸಿದೆ || ೭ ||