ದೇವ ಬಂದ

ರಚನೆಕಾರ: ಪುರಂದರದಾಸರು

ವರ್ಗ: ವಿಷ್ಣು

ದೇವ ಬಂದ ನಮ್ಮಸ್ವಾಮಿ ಬಂದಾನೋ
ದೇವರ ದೇವಶಿಖಾಮಣಿ ಬಂದಾನೋ || ಪ ||

ಉರಗಶಯನ ಬಂದ ಗರುಡಗಮನ ಬಂದ
ನರಗೊಲಿದವ ಬಂದ ನಾರಾಯಣ ಬಂದಾನೋ || ೧ ||

ಮಂದರೋದ್ಧಾರ ಬಂದ ಮಾಮನೋಹರ ಬಂದ
ಬೃಂದಾವನಪತಿ ಗೋವಿಂದ ಬಂದಾನೋ || ೨ ||

ನಕ್ರಹರನು ಬಂದ ಚಕ್ರಧರನು ಬಂದ
ಅಕ್ರೂರಗೊಲಿದ ತ್ರಿವಿಕ್ರಮ ಬಂದಾನೋ || ೩ ||

ಪಕ್ಷಿವಾಹನ ಬಂದ ಲಕ್ಷ್ಮಣಾಗ್ರಜ ಬಂದ
ಅಕ್ಷಯಫಲದ ಶ್ರೀಲಕ್ಷ್ಮೀರಮಣ ಬಂದಾನೋ || ೪ ||

ನಿಗಮಗೋಚರ ಬಂದ ನಿತ್ಯತೃಪ್ತನು ಬಂದ
ನಗೆಮುಖ ಪುರಂದರವಿಠ್ಠಲ ಬಂದಾನೋ || ೫ ||