ದುರಿತಗಜ ಪಂಚಾನನ

ರಚನೆಕಾರ: ಶ್ರೀಪಾದರಾಜರು

ವರ್ಗ: ನರಸಿಂಹ

ದುರಿತಗಜ ಪಂಚಾನನ-ನರಹರಿಯೆ ದೇವರ ದೇವ ಕಾಯೊ ಗೋವಿಂದ || ಪ ||

ಹೆಸರುಳ್ಳ ನದಿಗಳು ಒಳಗೊಂಬೊ ಸಮುದ್ರನು
ಬಿಸುಡುವನೆ ಕಾಲುಹೊಳೆಗಳ ಗೋವಿಂದ || ೧ ||

ಒಂದು ಮೊಲಕೆ ಆರು ಹುಲಿ ಬಂದು ಕವಿದಿದೆ
ಬಂಧನ ಬಿಡೆಸೆನ್ನ ತಂದೆ ಗೋವಿಂದ || ೨ ||

ಹೆತ್ತ ಮಕ್ಕಳು ಹುಚ್ಚರಾದರೆ ತಾಯಿ ತಂದೆ
ಎತ್ತದೆ ನೆಲಕೆ ಬಿಸುಡುವರೆ ಗೋವಿಂದ || ೩ ||

ಮುನ್ನ ಮಾಡಿದ ಕರ್ಮ ಬೆನ್ನ ಬಿಡದಿದ್ದರೆ
ನಿನ್ನ ವಾಲೈಸಲ್ಯಾಕೆ ಗೋವಿಂದ || ೪ ||

ಆಪತ್ತು ತಾಪತ್ರಯ ಬೆನ್ನ ಬಿಡದಿದ್ದರೆ
ಶ್ರೀಪತಿ ಶರಣೆನ್ನಲ್ಯಾಕೆ ಗೋವಿಂದ || ೫ ||

ಅರಸು ಮುಟ್ಟಲು ದಾಸಿ ರಂಭೆಯಾದಳು ದೇವ
ಪುರುಷ ಮುಟ್ಟಲು ಲೋಹ ಸ್ವರ್ಣ ಗೋವಿಂದ || ೬ ||

ಮಾನಾಭಿಮಾನದೊಡೆಯ ರಂಗವಿಠಲ
ಜ್ಞಾನಿಗಳರಸನೆ ಕಾಯೋ ಗೋವಿಂದ || ೭ ||