ದ್ಯಾವಿ ನಮ್ಮ ದ್ಯಾವರು ಬಂದರು

ರಚನೆಕಾರ: ಕನಕದಾಸರು

ವರ್ಗ: ವಿಷ್ಣು

ದ್ಯಾವಿ ನಮ್ಮ ದ್ಯಾವರು ಬಂದರು ಬನ್ನೀರೆ, ನೋಡ ಬನ್ನಿರೆ || ಪ ||

ಕೆಂಗಣ್ಣ ಮೀನನಾಗಿ ನಮ ರಂಗ
ಗುಂಗಾಡು ಸೋಮನ ಕೊಂದಾನ್ಮ್ಯಾ
ಗುಂಗಾಡು ಸೋಮನ ಕೊಂದು ವೇದವನು
ಬಂಗಾರದೊಡಲನಿಗಿತ್ತಾನ್ಮ್ಯಾ || ೧ ||

ದೊಡ್ಡ ಮಡುವಿನೊಳಗೆ ನಮ ರಂಗ
ಗುಡ್ಡವ ಹೊತ್ಕೊಂಡು ನಿಂತಾನ್ಮ್ಯಾ
ಗುಡ್ಡವ ಹೊತ್ಕೊಂಡು ನಿಂತು ಸುರರನು
ದೊಡ್ಡವರನ್ನ ಮಾಡ್ಯಾನ್ಮ್ಯಾ || ೨ ||

ಚೆನ್ನ ಕಾಡಿನ ಹಂದಿಯಾಗಿ ನಮ ರಂಗ
ಚಿನ್ನದ ಕಣ್ಣನ ಕೊಂದಾನ್ಮ್ಯಾ
ಚಿನ್ನದ ಕಣ್ಣನ ಕೊಂದು ಭೂಮಿಯ
ವನಜಸಂಭವಗಿತ್ತಾನ್ಮ್ಯಾ || ೩ ||

ಸಿಟ್ಟಿಂದ ಸಿಂಹನಾಗಿ ನಮ ರಂಗ
ಹೊಟ್ಟೆಯ ಕರುಳ ಬಗೆದಾನ್ಮ್ಯಾ
ಹೊಟ್ಟೆಯ ಕರುಳ ಹಾರವ ಮಾಡಿ
ಪುಟ್ಟಗೆ ವರವ ಕೊಟ್ಟಾನ್ಮ್ಯಾ || ೪ ||

ಹುಡುಗ ಹಾರುವನಾಗಿ ನಮ ರಂಗ
ಬೆಡಗಲಿ ಮುಗಿಲಿಗೆ ಬೆಳೆದಾನ್ಮ್ಯಾ
ಬೆಡಗಲಿ ಮುಗಿಲಿಗೆ ಬೆಳೆದು ಬಲಿಯನ್ನ
ಅಡಿಯಿಂದ ಪಾತಾಳಕೊತ್ತ್ಯಾನ್ಮ್ಯಾ || ೫ ||

ತಾಯ ಮಾತನು ಕೇಳಿ ಸಾಸಿರ ತೋಳಿನ
ಆವಿನ ಕಳ್ಳನ ಕೊಂದಾನ್ಮ್ಯಾ
ಆವಿನ ಕಳ್ಳನ ಕೊಂದು ಭೂಮಿಯ
ಅವನಿಸುರರಿಗೆ ಇತ್ತಾನ್ಮ್ಯಾ || ೬ ||

ಪಿಂಗಳ ಕಣ್ಣಿನ ಕೊಂಗಗಳ ಕೂಡಿ
ಛಂಗನೆ ಲಂಕೆಗೆ ಪೋದಾನ್ಮ್ಯಾ
ಛಂಗನೆ ಲಂಕೆಗೆ ಪೋಗಿ ನಮ ರಂಗ
ಹೆಂಗಸುಗಳ್ಳನ ಕೊಂದಾನ್ಮ್ಯಾ || ೭ ||

ಕರಿಯ ಹೊಳೆಯ ಬಳಿ ತುರುಗಳ ಕಾಯುತ
ಉರಗನ ಮಡುವ ಧುಮುಕ್ಯಾನ್ಮ್ಯಾ
ಉರಗನ ಹೆಡೆ ಮೇಲೆ ಹಾರ್ಹಾರಿ ಕುಣಿವಾಗ
ವರವ ನಾರೇರ್ಗೆ ಕೊಟ್ಟಾನ್ಮ್ಯಾ || ೮ ||

ಭಂಡನಂದದಿ ಕುಂಡೆಯ ಬಿಟುಗೊಂಡು
ಕಂಡ ಕಂಡಲ್ಲಿಗೆ ತಿರುಗ್ಯಾನ್ಮ್ಯಾ
ಕಂಡ ಕಂಡಲ್ಲಿಗೆ ತಿರುಗಿ ತ್ರಿಪುರರ
ಹೆಂಡಿರನೆಲ್ಲ ಕೆಡಿಸ್ಯಾನ್ಮ್ಯಾ || ೯ ||

ಚೆಲುವ ಹೆಂಡತಿಯ ಕುದುರೆಯ ಮಾಡಿ
ಒಳ್ಳೆ ರಾಹುತನಾದಾನ್ಮ್ಯಾ
ಒಳ್ಳೆ ರಾಹುತನಾಗಿ ಮ್ಲೇಚ್ಛರ
ಡೊಳ್ಳು ಹೊಟ್ಟೆಯ ಮ್ಯಾಲೊದ್ದಾನ್ಮ್ಯಾ || ೧೦ ||

ಡೊಳ್ಳಿನ ಮ್ಯಾಲ್ ಕೈ ಭರಮಪ್ಪ ಹಾಕ್ಯಾನು
ತಾಳವ ಶಿವನಪ್ಪ ತಟ್ಟಾನ್ಮ್ಯಾ
ಒಳ್ಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನು
ಚೆಲುವ ಕನಕಪ್ಪ ಕುಣಿದಾನ್ಮ್ಯಾ || ೧೧ ||