ಎದುರಾರೈ ಗುರುವೆ

ರಚನೆಕಾರ: ವ್ಯಾಸರಾಜ ತೀರ್ಥರು

ವರ್ಗ: ಗುರು ಕೀರ್ತನೆ

ಎದುರಾರೈ ಗುರುವೆ ನಿಮಗೆ ಸಮನಾರೈ
ಮದನಗೋಪಾಲನ ಪ್ರಿಯ ಜಯರಾಯ || ಪ ||

ಕಡುಗರ್ಜಿಸುವ ಕೇಸರಿಯಂತೆ ನಿಮ್ಮ ವಾದ
ವಡಣೆಯ ಕೇಳುತ ನುಡಿ ಮುಂದೋಡದೆ
ಗಡಗಡ ನಡುಗುತ ಮಾಯ್ಗೋಮಾಯ್ಗಳು
ಅಡವಿಯೊಳಡಗೋರು ನಿಮ್ಮ ಭೀತಿಯಲಿ || ೧ ||

ಕುಟಿಲ ಮತಗಳೆಂಬೊ ಚಟುಲಾಂಧಕಾರಕ್ಕೆ
ಪಟುತರ ತತ್ತ್ವಪ್ರಕಾಶಿಕೆಯೆಂಬ
ಚಟುಲತಾಪದಿಂದ ಖಂಡಿಸಿ ತೇಜೋ-
ತ್ಕಟದಿ ಮೆರದ ಬುಧಕಟಕಾಬ್ಜಮಿತ್ರ || ೨ ||

ಅಮಿತ ದ್ವಿಜಾವಳಿ ಕುಮುದಗಳರಳಿಸಿ
ವಿಮತರ ಮುಖಕಮಲಂಗಳ ಬಾಡಿಸಿ
ಸ್ವಮತರ ಹೃತ್ಸಂತಾಪಗಳೋಡಿಸಿ
ವಿಮಲ ಸುಕೀರ್ತಿಯ ಪಡೆದೆಯೋ ಚಂದ್ರ || ೩ ||

ವೇದಶಾಸ್ತ್ರಗಳೆಂಬೋ ಶೃಂಗಗಳಿಂದ ಸು-
ಧಾದಿ ಗ್ರಂಥಗಳೆಂಬೋ ಸ್ತನದಿಂದೊಪ್ಪುತ ತತ್ತ್ವ
ಬೋಧನೆಯೆಂಬ ದುಗ್ಧ ಶಿಷ್ಯವತ್ಸಂಗಳಿಗೆ
ಆದರದಲಿ ಕೊಟ್ಟ ಯತಿಸುರಧೇನು || ೪ ||

ವ್ಯಾಸಸೂತ್ರಗಳೆಂಬ ಮಂದರವನು ವೇದ
ರಾಶಿಯೆಂಬ ವಾರಾಶಿಯೊಳಿಟ್ಟು
ಶ್ರೀ ಸರ್ವಜ್ಞರ ವಾಕ್ಯಪಾಶದಿ ಸುತ್ತಿ
ಭಾಸುರ ನ್ಯಾಯಸುಧಾ ಪಡೆದ ಯತೀಂದ್ರ || ೫ ||

ವನಜನಾಭನ ಗುಣಮನೆಗಳು ಸರ್ವಜ್ಞ
ಮುನಿಕೃತ ಗ್ರಂಥಗಳವನಿಯೊಳಗಡೆ
ಸಜ್ಜನರಿಗೆ ಬೇಕಾಂಜನದಿಂದ ತೋರಿಸಿ
ಘನ ಸುಖಸಾಧನ ಮಾಡಿದ್ಯೋ ಧೀರ || ೬ ||

ಅರ್ಥಿಮಂದಾರ ವೇದಾರ್ಥವಿಚಾರ ಸ-
ಮರ್ಥ ಶ್ರೀಕೃಷ್ಣ ಪಾದಾಂಬುಜಭೃಂಗ
ಪ್ರತ್ಯರ್ಥಿ ಮತ್ತೇಭಕಂಠೀರವಕ್ಷೋಭ್ಯ
ತೀರ್ಥಕರಜ ಜಯತೀರ್ಥ ಯತೀಂದ್ರ || ೭ ||