ಈಶ ನಿನ್ನ ಚರಣ ಭಜನೆ

ರಚನೆಕಾರ: ಕನಕದಾಸರು

ವರ್ಗ: ಶ್ರೀಕೃಷ್ಣ

ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನು
ದೋಷರಾಶಿ ನಾಶಮಾಡು ಶ್ರೀಶ ಕೇಶವ || ಪ ||

ಶರಣುಹೊಕ್ಕೆನಯ್ಯ ಎನ್ನ ಮರಣಸಮಯದಲ್ಲಿ ನಿನ್ನ
ಚರಣಸ್ಮರಣೆ ಕರುಣಿಸಯ್ಯ ನಾರಾಯಣ || ೧ ||

ಶೋಧಿಸೆನ್ನ ಭವದ ಕಲುಷ ಬೋಧಿಸಯ್ಯ ಜ್ಞಾನವೆನಗೆ
ಬಾಧಿಸುವಾ ಯಮನ ಬಾಧೆ ಬಿಡಿಸು ಮಾಧವಾ || ೨ ||

ಹಿಂದನೇಕ ಯೋನಿಗಳಲಿ ಬಂದು ಬಂದು ನೊಂದೆ ನಾನು
ಎಂದು ಭವದ ಬಂದ ಬಿಡಿಸು ತಂದೆ ಗೋವಿಂದಾ || ೩ ||

ಭ್ರಷ್ಟನೆನಿಸಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆ
ಶಿಷ್ಟರೊಡನೆ ಇಟ್ಟು ಕಷ್ಟ ಬಿಡಿಸು ವಿಷ್ಣುವೆ || ೪ ||

ಮೊದಲು ನಿನ್ನ ಪಾದಪೂಜೆ ಮುದದಿ ಮಾಡುವೆನೈ ನಾನು
ಹೃದಯದೊಳಗೆ ಹುದುಗಿಸಯ್ಯ ಮಧುಸೂದನಾ || ೫ ||

ಕವಿದುಕೊಂಡು ಇರುವ ಪಾಪ ಸವೆದು ಪೋಗುವಂತೆ ಮಾಡಿ
ಜವನ ಬಾಧೆಯನ್ನು ಬಿಡಿಸು ತವೆ ತ್ರಿವಿಕ್ರಮಾ || ೬ ||

ಕಾಮಜನಕ ನಿನ್ನ ನಾಮ ಪ್ರೇಮದಿಂದ ಪಾಡುವಂಥ
ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನಾ || ೭ ||

ಮದನನಯ್ಯ ನಿನ್ನ ಮಹಿಮೆ ವದನದಲಿಯೆ ಇರುವಂತೆ
ಹೃದಯದಲ್ಲಿ ಸದನ ಮಾಡು ಮುದದಿ ಶ್ರೀಧರಾ || ೮ ||

ಹುಸಿಯನಾಡಿ ಹೊಟ್ಟೆ ಹೊರೆವ ವಿಷಯದಲ್ಲಿ ರಸಿಕನೆಂದು
ಹುಸಿಗೆ ನೀನು ಹಾಕದಿರೋ ಹೃಷಿಕೇಶನೆ || ೯ ||

ಅಬ್ದಿಯೊಳಗೆ ಬಿದ್ದು ನಾನು ಒದ್ದು ಕೊಂಬೆನಯ್ಯ ಭವದಿ
ಗೆದ್ದು ಪೋಪ ಬುದ್ಧಿ ತೋರು ಪದ್ಮನಾಭನೆ || ೧೦ ||

ಕಾಮ-ಕ್ರೋಧ ಬಿಡಿಸಿ ನಿನ್ನ ನಾಮ ಜಿಹ್ವೆಯೊಳಗೆ ನುಡಿಸು
ಶ್ರೀ ಮಹಾನುಭಾವನಾದ ದಾಮೋದರಾ || ೧೧ ||

ಪಂಕಜಾಕ್ಷ ನೀನು ಎನ್ನ ಮಂಕುಬುದ್ಧಿ ಬಿಡಿಸಿ ನಿನ್ನ
ಕಿಂಕರನನು ಮಾಡಿಕೊಳ್ಳು ಸಂಕರುಷಣ || ೧೨ ||

ಏಸು ಜನ್ಮ ಬಂದರೇನು ದಾಸನಾಗಲಿಲ್ಲ ನಾನು
ಗಾಸಿಮಾಡದಿರು ಇನ್ನು ವಾಸುದೇವನೆ || ೧೩ ||

ಬುದ್ಧಿಶೂನ್ಯನಾಗಿ ನಾನು ಕದ್ದ ಕಳ್ಳನಾದೆ ಎನ್ನ
ತಿದ್ದಿ ಹೃದಯ ಶುದ್ಧಮಾಡು ಪ್ರದ್ಯುಮ್ನನೆ || ೧೪ ||

ಜನನಿ ಜನಕ ನೀನೆಯೆಂದು ಎನುವೆನಯ್ಯ ದೀನಬಂಧು
ಎನಗೆ ಮುಕ್ತಿ ಚರಣದಲ್ಲಿ ಪುರುಷೋತ್ತಮಾ || ೧೫ ||

ಹರುಷದಿಂದ ನಿನ್ನ ನಾಮ ಸ್ಮರಿಸುವಂತೆ ಮಾಡೋ ಪ್ರೇಮ
ಇರಿಸು ನಿನ್ನ ಚರಣದಲ್ಲಿ ಪುರುಷೋತ್ತಮ || ೧೬ ||

ಸಾಧುಸಂಗ ಕೊಟ್ಟು ನಿನ್ನ ಪಾದಭಜಕನೆನಿಸು ಎನ್ನ
ಭೇಧಮಾಡಿ ನೋಡದಿರು ಅಧೋಕ್ಷಜಾ || ೧೭ ||

ಚಾರುಚರಣ ತೋರಿ ಎನಗೆ ಪಾರುಗಾಣಿಸಯ್ಯ ಕೊನೆಗೆ
ಭಾರಹಾಕಿರುವೆ ನಿನಗೆ ನಾರಸಿಂಹನೆ || ೧೮ ||

ಸಂಚಿತಾರ್ಥ ಪಾಪಗಳನು ಕಿಂಚಿತಾದರಿಡದಂತೆ
ಮುಂಚಿತಾಗಿ ಕಳೆಯಬೇಕು ಸ್ವಾಮಿ ಅಚ್ಯುತ || ೧೯ ||

ಜ್ಞಾನಭಕ್ತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು ಎನ್ನ
ಹೀನಬುದ್ಧಿ ಬಿಡಿಸೂ ಮುನ್ನ ಜನಾರ್ದನಾ || ೨೦ ||

ಜಪತಪಾನುಷ್ಠಾನ ನೀನು ಒಪ್ಪುವಂತೆ ಮಾಡಲಿಲ್ಲ
ತಪ್ಪಕೋಟಿ ಕ್ಷಮಿಸಬೇಕು ಉಪೇಂದ್ರನೆ || ೨೧ ||

ಮೊರೆಯ ಇಡುವೆನಯ್ಯ ನಿನಗೆ ಸೆರೆಯ ಬಿಡಿಸು ಭವದ ಎನಗೆ
ಇರಿಸು ಭಕ್ತರೊಳಗೆ ಪರಮ ಪುರುಷ ಶ್ರೀಹರೆ || ೨೨ ||

ಪುಟ್ಟಿಸಲು ಬೇಡವಿನ್ನು ಪುಟ್ಟಿಸಿದಕೆ ಪಾಲಿಸಿನ್ನು
ಇಷ್ಟು ಬೇಡಿಕೊಂಬೆ ನಾನು ಶ್ರೀಕೃಷ್ಣನೆ || ೨೩ ||

ಸತ್ಯವಾದ ನಾಮಗಳನು ನಿತ್ಯದಲ್ಲಿ ಪಠಿಸುವವನ
ಅರ್ಥಿಯಿಂದ ಸಲಹುವನು ಕರ್ತು ಕೇಶವ || ೨೪ ||

ಮರೆದು ಬಿಡದೆ ಹರಿಯನಾಮ ಬರೆದು ಓದಿ ಕೇಳಿದರಿಗೆ
ಕರೆದು ಕೊಡುವ ಮುಕ್ತಿ ಬಾಡದಾದಿಕೇಶವ || ೨೫ ||