ಎಲ್ಲಾರು ಮಾಡುವುದು ಹೊಟ್ಟೆಗಾಗಿ

ರಚನೆಕಾರ: ಕನಕದಾಸರು

ವರ್ಗ: ಉಪದೇಶಾತ್ಮಕ

ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ || ಪ ||

ವೇದಶಾಸ್ತ್ರ ಪಂಚಾಂಗವ ಓದಿಕೊಂಡು ಅನ್ಯರಿಗೆ
ಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ || ೧ ||

ಚಂಡಭಟರಾಗಿ ನಡೆದು ಕತ್ತಿ ಡಾಲು ಕೈಲಿ ಹಿಡಿದು
ಖಂಡ ತುಂಡ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ || ೨ ||

ಅಂಗಡಿ ಮುಂಗಟ್ಟನ್ನ ಹೂಡಿ ವ್ಯಂಗ ಮಾತುಗಳನ್ನಾಡಿ
ಭಂಗಬಿದ್ದು ಗಳಿಸುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ || ೩ ||

ಕುಂಟೆ ತುದಿಗೆ ಕೊರಡು ಹಾಕಿ ಹೆಂಟೆ ಮಣ್ಣು ಸಮನು ಮಾಡಿ
ರಂಟೆ ಹೊಡೆದು ಬೆಳೆಸುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ || ೪ ||

ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮರುಳುಮಾಡಿ
ಸುಳ್ಳು ಬೊಗಳಿ ತಿಂಬುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ || ೫ ||

ಕೊಟ್ಟ ಹಣವನು ಕುಟ್ಟಿಕೊಂಡು ಕಟ್ಟಿಗೆಯನು ಹೊತ್ತುಕೊಂಡು
ಕಷ್ಟ ಮಾಡಿ ಉಣ್ಣುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ || ೬ ||

ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿ
ನಾನಾ ವೇಷಗಳೆಲ್ಲ ಹೊಟ್ಟೆಗಾಗಿ ಗೇಣುಬಟ್ಟೆಗಾಗಿ || ೭ ||

ಹಳ್ಳದಲಿ ಕುಳಿತುಕೊಂಡು ಕಲ್ಲು ದೊಣ್ಣೆ ಹಿಡಿದುಕೊಂಡು
ಕಳ್ಳತನವ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ || ೮ ||

ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿ
ಚಂದದಿಂದ ಮೆರೆಯುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ || ೯ ||

ಉನ್ನತ ಕಾಗಿನೆಲೆಯಾದಿಕೇಶವನಾ ಧ್ಯಾನವನ್ನು
ಮನಮುಟ್ಟಿ ಮಾಡುವುದು ಮುಕ್ತಿಗಾಗಿ ಆನಂದಕ್ಕಾಗಿ || ೧೦ ||