ಎಲ್ಲಿರುವನೋ ರಂಗ

ರಚನೆಕಾರ: ಕನಕದಾಸರು

ವರ್ಗ: ಶ್ರೀಕೃಷ್ಣ

ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ || ಪ ||

ಎಲ್ಲಿ ಭಕ್ತರು ಕರೆಯೆ ಅಲ್ಲಿ ಬಂದೊದಗುವನು || ಅ.ಪ ||

ತರಳ ಪ್ರಹ್ಲಾದ ಹರಿ ವಿಶ್ವಮಯನೆಂದು
ಭರದೊದೆಯಲವನ ಪಿತ ಕೋಪದಿಂದ
ಸ್ಥಿರವಾದೊಡೀ ಕಂಭದಲಿ ತೋರು ತೋರೆನಲು
ಭರದಿಂದ ಬರಲದಕೆ ವೈಕುಂಠ ನೆರೆಮನೆಯೇ? || ೧ ||

ಪಾಪಕರ್ಮವ ಮಾಡಿದ ಅಜಮಿಳನ ಯಮಭಟರು
ಕೋಪದಿಂದೆಳೆಯುತಿರೆ ಭೀತಿಯಿಂದ
ತಾ ಪುತ್ರನನು ಕರೆಯೆ ಕೇಳಿ ರಕ್ಷಿಸೆ
ಶ್ವೇತದ್ವೀಪವೀ ಧರೆಗೆ ಸಮೀಪದಲ್ಲಿಹುದೇ? || ೨ ||

ಕರಿರಾಜನನು ನೆಗಳು ನುಂಗುತಿರೆ ಭಯದಿಂದ
ಮೊರೆಯಿಡಲು ಕೇಳಿ ತ್ವರಿತದಲಿ ಬಂದು
ಕರುಣದಲಿ ಬಂದವನ ಪರಿಹರಿಸೆ ಗಜರಾಜ
ನಿರುವ ಸರಸಿಯು ಅನಂತಾಸನಕೆ ಮುಮ್ಮನೆಯೇ? || ೩ ||

ಕುರುಪತಿಯು ದ್ರೌಪದಿಯ ಸೀರೆಯನು ಸೆಳೆಯುತಿರೆ
ತರುಹಿ ಹಾ ಕೃಷ್ಣ ಎಂದೊರೆ ಕೇಳ್ದು
ಭರದಿಂದ ಅಕ್ಷಯಾಂಬರವೀಯೆ ಹಸ್ತಿನಾ
ಪುರಿಗೆ ದ್ವಾರಾವತಿಯು ಕೂಗಳತೆಯೇ? || ೪ ||

ಅಣುಹೊತ್ತಿನೊಳೆಲ್ಲ ಪರಿಪೂರ್ಣ ವಿಶ್ವಮಯ
ಗಣನೆಯಿಲ್ಲದ ಮಹಾಮಹಿಮನೆನಿಪ
ಘನ ಕೃಪಾನಿಧಿ ಕಾಗಿನೆಲೆಯಾದಿಕೇಶವನು
ನೆನೆವರು ಮನದೊಳಿಹನೆಂಬ ಬಿರುದುಂಟಾಗಿ || ೫ ||