ಎಂದಿದ್ದರೀ ಕೊಂಪೆ ಎನಗೆ ನಂಬಿಕೆಯಿಲ್ಲ

ರಚನೆಕಾರ: ಕನಕದಾಸರು

ವರ್ಗ: ಉಪದೇಶಾತ್ಮಕ

ಎಂದಿದ್ದರೀ ಕೊಂಪೆ ಎನಗೆ ನಂಬಿಕೆಯಿಲ್ಲ
ಮುಂದರಿತು ಹರಿಪಾದ ಹೊಂದುವುದು ಲೇಸು || ಪ ||

ಎಲುವುಗಳು ತೊಳೆ ಜಂತೆ ನರಗಳವು ಬಿಗಿದಂತೆ
ಬಲಿದ ಚರ್ಮವು ಮೇಲು ಹೊದಿಕೆಯಂತೆ
ಗಳಗಳನೆ ನುಡಿವ ನಾಲಗೆ ಗಂಟೆಯುಲಿಯಂತೆ
ಕೆಲಕಾಲಕೀ ಕೊಂಪೆ ಕಡೆಗಾಹುದಂತೆ || ೧ ||

ಕಂಡಿಗಳು ಒಂಬತ್ತು ಕಳಬಂಟರೈವರು
ಅಂಡಲೆವುದೊತ್ತಿನಲಿ ಷಡುವರ್ಗವು
ಮಂಡಲಕೆ ಹೊಸಪರಿಯು ಮನ್ಮಥನ ಠಾಣ್ಯವಿದು
ಮಂಡೆಹೋಗುವುದನ್ನು ಅರಿಯದೀ ಕೊಂಪೆ || ೨ ||

ಕೊಂಪೆಯಲಿ ಶೃಂಗಾರ ಕೊಂಡಾಡಲಳವಲ್ಲ
ಕೆಂಪುಬಣ್ಣಗಳಿಂದ ಚೆನ್ನಾಯಿತು
ಇಂಪಿನಲಿ ಕಾಗಿನೆಲೆಯಾದಿಕೇಶವನನ್ನು
ಸೊಂಪಿನಲಿ ನೆನೆನೆನೆದು ಸುಖಿಯಾಗೋ ಮನುಜಾ || ೩ ||