ಏನೆಂದು ಕೊಂಡಾಡಿ ಸ್ತುತಿಸಲೋ

ರಚನೆಕಾರ: ಕನಕದಾಸರು

ವರ್ಗ: ಶ್ರೀನಿವಾಸ

ಏನೆಂದು ಕೊಂಡಾಡಿ ಸ್ತುತಿಸಲೋ ದೇವ ನಾನೇನು
ಬಲ್ಲೆ ನಿನ್ನ ಮಹಿಮೆಗಳ ಮಾಧವ || ಪ ||

ಹರಿಮುಕುಂದನು ನೀನು ನರಜನ್ಮ ಹುಳು ನಾನು
ಪರಮಾತ್ಮನು ನೀನು ಪಾಮರನು ನಾನು
ಗರುಡಗಮನನು ನೀನು ಮರುಳು ಪಾಪಿಯು ನಾನು
ಪರಂಜ್ಯೋತಿಯು ನೀನು ದುರುಳ ತಿರುಕನು ನಾನು || ೧ ||

ವಾರಿಧಿಶಯನನಾದ ಕಾರುಣ್ಯನಿಧಿ ನೀನು
ಘೋರದಿಂದಿಹ ಕಾಮಿಕ್ರೋಧಿ ನಾನು
ಈರೇಳು ಭುವನದೊಳು ಇರುವ ಮೂರುತಿ ನೀನು
ದೂರಿ ನಿನ್ನನು ಬೈವ ದುಷ್ಟ ನಾನು || ೨ ||

ಅಣುರೇಣು ತೃಣಗಳಲಿ ಪರಿಪೂರ್ಣನು ನೀನು
ಕ್ಷಣಕ್ಷಣಕೆ ಅವಗುಣದ ಕುಕರ್ಮಿ ನಾನು
ವಾಣಿಯರಸನ ಪೆತ್ತ ವೈಕುಂಠಪತಿ ನೀನು
ಕ್ಷಣಭಂಗುರ ತನುವಿನ ಗೊಂಬೆ ನಾನು || ೩ ||

ಕಂಬದಲಿ ಬಂದ ಆನಂದಮೂರ್ತಿ ನೀನು
ನಂಬಿಕೆಯಿಲ್ಲದ ಪ್ರಪಂಚಕನು ನಾನು
ಅಂಬರೀಷಗೆ ಒಲಿದ ಅಕ್ರೂರಸಖ ನೀನು
ಡಂಬಕರ್ಮಿಯು ನಾನು ನಿರ್ಜಿತನು ನೀನು || ೪ ||

ತಿರುಪತಿಯ ವಾಸ ಶ್ರೀವೆಂಕಟೇಶನೆ ನಿನ್ನ
ಚರಣಸೇವಕರ ಸೇವಕನು ನಾನು
ಬಿರುದುಳ್ಳವನು ನೀನು ಮೊರೆಹೊಕ್ಕವನು ನಾನು
ಸಿರಿ ಕಾಗಿನೆಲೆಯಾದಿಕೇಶವನು ನೀನು || ೫ ||