ಏನು ಭ್ರಮೆ ಮನುಜರಿಗೆ

ರಚನೆಕಾರ: ಶ್ರೀಪಾದರಾಜರು

ವರ್ಗ: ಉಪದೇಶಾತ್ಮಕ

ಏನು ಭ್ರಮೆ ಮನುಜರಿಗೆ ಎಷ್ಟು ಮಮತೆ ಪ್ರಕೃತಿಯಲಿ
ಮೀನು ಗಾಳವ ನುಂಗಿ ಮೋಸಹೋದ ತೆರನಂತೆ || ಪ ||

ನನ್ನ ಮನೆ ನನ್ನ ಸತಿ ನನ್ನ ಸುತರೆಂದೆನಿಸಿ
ಹೊನ್ನುಗಳ ಗಳಿಸಿ ಹೆಚ್ಚು ಹೋರ್ಯಾಡಿ
ಸಣ್ಣವರ ಮದುವೆ ಸಂಭ್ರಮದಿ ಮಾಡುವೆನೆಂದು
ಅನ್ನ ಮೊದಲು ಕಾಣದೆ ಅಂತರಪಿಶಾಚಿಯಂತೆ || ೧ ||

ಬಲುವೋದಿಕೆಯಲ್ಲಿ ಬಲ್ಲವರೆನಿಸಬೇಕೆನುತ
ಹಲವು ಬುದ್ಧಿಯಲಿ ಹಿರ್ರನೆ ಹಿಗ್ಗುತ
ಮಲಿನ ಮನಸಿನ ಜ್ಞಾನದಲಿ ತಾನರಿಯದೆ
ಬಲೆಯಲ್ಲಿ ಸಿಲುಕಿದ ಪಕ್ಷಿಯಂತೆ ಬಳಲುತಿಹ || ೨ ||

ಮಿಗಿಲು ಆಸೆಗೆ ಬಿದ್ದು ಬಗೆ ಬಗೆ ಹೂಣಿಕೆಯಲಿ
ಹೊಗದಲ್ಲಿ ಹೊಗುವರು ಹೊಲಬಿಟ್ಟು ತಿಳಿಯರು
ಖಗವಾಹನ ಮುದ್ದು ರಂಗವಿಠಲನ ನಾಮ ಸ್ಮರಿಸಲು
ವಿಗಡ ಸಂಸಾರ ಹಗರಣ ನೀರಗುಳ್ಳೆಯಂತೆ || ೩ ||