ಏನು ಕಾರಣ ಬಾಯಿ ತೆರೆದಿ

ರಚನೆಕಾರ: ಕನಕದಾಸರು

ವರ್ಗ: ನರಸಿಂಹ

ಏನು ಕಾರಣ ಬಾಯಿ ತೆರೆದಿ – ಪೇಳೆಲೊ
ದಾನವಾಂತಕ ಅಹೋಬಲ ನಾರಸಿಂಹನೆ || ಪ ||

ನಿಗಮ ಚೋರನ ಕೊಲಲು ತೆರೆದೆಯೋ ಈ ಬಾಯ
ನಗವ ಬೆನ್ನಲಿ ಹೊತ್ತು ನಡುಗಿ ತೆರೆದೆಯೋ ಬಾಯ
ಭೂಮಿಗಳ್ಳನ ಕೊಂದು ಬಳಲಿ ತೆರೆದೆಯೋ ಬಾಯ
ಜಗವರಿಯೆ ಪೇರುರವಿರಿದ ಪ್ರಹ್ಲಾದವರದ
ಅಹೋಬಲ ನಾರಸಿಂಹನೆ || ೧ ||

ಬಲಿಯ ದಾನವ ಬೇಡಲೆಂದು ತೆರೆದೆಯೊ ಬಾಯ
ಛಲದಿಂದ ಕ್ಷತ್ರಿಯರ ಕೊಲಲು ತೆರೆದೆಯೊ ಬಾಯ
ಕುಲಸತಿಯ ಅರಸಿ ಕಾಣದೆ ತೆರೆದೆಯೊ ಬಾಯ
ಮರೆತು ಮಾವನ ಕೊಂದು ನಿಂದೆ – ಇಂಥ
ಇಳಿಯ ಬಾರದ ಭೂಮಿಗಿಳಿದ ನಾರಸಿಂಹ || ೨ ||

ನಾರಿಯರ ಚೆಲ್ವಿಕೆಯ ನೋಡಿ ತೆರೆದೆಯೊ ಬಾಯ
ಏರಿ ಅಶ್ವವ ಮೆಟ್ಟಿ ಅಳಲಿ ತೆರೆದೆಯೊ ಬಾಯ
ಮಾರಪಿತ ಕಾಗಿನೆಲೆಯಾದಿಕೇಶವ ರಂಗಧೀರ
ಶ್ರೀನಾಥ ಭವನಾಶ ಪೇಳೋ ಪೇಳು
ಏತಕೆ ಅಹೋಬಲ ನಾರಸಿಂಹನೆ || ೩ ||