ಎಷ್ಟು ಸಾಹಸವಂತ

ರಚನೆಕಾರ: ವಾದಿರಾಜ ತೀರ್ಥರು

ವರ್ಗ: ಹನುಮಂತ

ಎಷ್ಟು ಸಾಹಸವಂತ ನೀನೇ ಬಲವಂತ
ದಿಟ್ಟ ಮೂರ್ತಿ ಭಳಿಭಳಿರೇ ಹನುಮಂತ || ಪ ||

ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆ
ಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೋ || ಅ.ಪ ||

ರಾಮರಪ್ಪಣೆಯಿಂದ ಶರಧಿಯ ದಾಟಿ
ಆ ಮಹಾ ಲಂಕೆಯ ಕಂಡೆ ಕಿರೀಟಿ
ಸ್ವಾಮಿಯ ಕಾರ್ಯವ ಪ್ರೇಮದಿ ನಡೆಸಿದಿ
ಈ ಮಹಿಯೊಳು ನಿನಗಾರೈ ಸಾಟಿ || ೧ ||

ದೂರದಿಂದ ಅಸುರನ ಪುರವನ್ನು ನೋಡಿ
ಭರದಿ ಶ್ರೀರಾಮರ ಸ್ಮರಣೆಯ ಮಾಡಿ
ಹಾರಿದೆ ಹರುಷದಿ ಹರಿಸಿ ಲಂಕಿಣಿಯನು
ವಾರಿಜಮುಖಿಯನು ಕಂಡು ಮಾತಾಡಿ || ೨ ||

ರಾಮರ ಕ್ಷೇಮವ ರಮಣಿಗೆ ಪೇಳಿ
ತಾಮಸ ಮಾಡದೆ ಮುದ್ರಿಕೆ ನೀಡಿ
ಪ್ರೇಮದಿ ಜಾನಕಿ ಕುರುಹನು ಕೊಡಲಾಗ
ಆ ಮಹಾವನದೊಳು ಫಲವನು ಬೇಡಿ || ೩ ||

ಕಣ್ಣಿಗೆ ಪ್ರಿಯವಾದ ಹಣ್ಣನು ಕೊಯ್ದು
ಹಣ್ಣಿನ ನೆವದಲಿ ಅಸುರರ ಹೊಯ್ದು
ಪಣ್ಣಪಣ್ಣನೆ ಹಾರಿ ನೆಗೆನೆಗೆದಾಡುತ
ಬಣ್ಣಿಸಿ ಅಸುರರ ಬಲವನು ಮುರಿದು || ೪ ||

ಶೃಂಗಾರ ವನದೊಳಗಿದ್ದ ರಾಕ್ಷಸರ
ಅಂಗವನಳಿಸಿದೆ ಅತಿರಣಶೂರ
ನುಂಗಿ ಅಸ್ತ್ರಗಳ ಅಕ್ಷಕುಮಾರನ
ಭಂಗಿಸಿ ಬಿಸುಟೆಯೋ ಬಂದ ರಕ್ಕಸರ || ೫ ||

ದೂರು ಪೇಳಿದರೆಲ್ಲಾ ರಾವಣನೊಡನೆ
ಚೀರುತ್ತ ಕರೆಸಿದ ಇಂದ್ರಜಿತುವನೆ
ಚೋರಕಪಿಯ ನೀ ಹಿಡಿತಹುದೆನ್ನುತ
ಶೂರರ ಕಳುಹಿದ ನಿಜಸುತನೊಡನೆ || ೬ ||

ಪಿಡಿದನು ಇಂದ್ರಜಿತು ಕಡು ಕೋಪದಿಂದ
ಹೆಡೆಮುರಿ ಕಟ್ಟಿದ ಬ್ರಹ್ಮಾಸ್ತ್ರದಿಂದ
ಗುಡುಗುಡುಗುಟ್ಟುತ ಕಿಡಿಕಿಡಿಯಾಗುತ
ನಡೆದನು ಲಂಕೆಯ ಒಡೆಯನಿದ್ದೆಡೆಗೆ || ೭ ||

ಕಂಡ ರಾವಣನು ಉದ್ದಂಡಕಪಿಯನು
ಮಂಡೆಯ ತೂಗುತ ಮಾತಾಡಿಸಿದನು
ಭಂಡು ಮಾಡದೆ ಬಿಡೆ ನೋಡು ಕಪಿಯನೆ
ಗಂಡುಗಲಿಯು ದುರುದುರಿಸಿ ನೋಡಿದನು || ೮ ||

ಛಲವ್ಯಾಕೋ ನಿನಗಿಷ್ಟು ಎಲೆ ಕೊಡಗನೆ
ನೆಲೆಯಾವುದ್ಹೇಳೋ ನಿನ್ನೊಡೆಯನ್ಹೆಸರನ್ನು
ಬಲವಂತ ರಾಮರ ಬಂಟ ಬಂದಿಹೆನೋ
ಹಲವು ಮಾತ್ಯಾಕೋ ಹನುಮನು ನಾನೇ || ೯ ||

ಬಡ ರಾವಣನೆ ನಿನ್ನ ಬಡಿದು ಹಾಕುವೆನೋ
ಒಡೆಯನಪ್ಪಣೆಯಿಲ್ಲ ಎಂದು ತಾಳಿದೆನೋ
ಹುಡಿಯೇಳಿಸುವೆನೋ ಖುಲ್ಲ ರಕ್ಕಸನೆ
ತೊಡೆವೆನೋ ನಿನ್ನ ಪಣೆಯ ಅಕ್ಷರವ || ೧೦ ||

ನಿನ್ನಂಥ ದೂತರು ರಾಮನ ಬಳಿಯೊಳು
ಇನ್ನೆಷ್ಟು ಮಂದಿ ಉಂಟು ಹೇಳೋ ನೀ ತ್ವರಿಯ
ನನ್ನಂಥ ದೂತರು ನಿನ್ನಂಥ ಪ್ರೇತರು
ಇನ್ನೂರು ಮುನ್ನೂರು ಕೋಟಿ ಕೇಳರಿಯಾ || ೧೧ ||

ಕಡು ಕೋಪದಿಂದಲಿ ಖೂಳ ರಾವಣನು
ಸುಡಿರೆಂದ ಬಾಲವ ಸುತ್ತಿ ವಸನವನು
ಒಡೆಯನ ಮಾತಿಗೆ ತಡೆಬಡೆ ಇಲ್ಲದೆ
ಒಡನೆ ಮುತ್ತಿದರು ಗಡಿಮನೆಯವರು || ೧೨ ||

ತಂದರು ವಸನವ ತಂಡತಂಡದಲಿ
ಒಂದೊಂದು ಮೂಟೆ ಎಂಭತ್ತು ಕೋಟಿಯಲಿ
ಚಂದದಿ ಹರಳಿನ ತೈಲದೊಳದ್ದಿಸಿ
ನಿಂದ ಹನುಮನು ಬಾಲವ ಬೆಳೆಸುತ || ೧೩ ||

ಶಾಲು ಸಕಲಾತಿಯು ಸಾಲದೆಯಿರಲು
ಬಾಲೇರ ವಸ್ತ್ರವ ಸೆಳೆದು ತಾರೆನಲು
ಬಾಲವ ನಿಲ್ಲಿಸೆ ಬೆಂಕಿಯನಿಡುತಲಿ
ಕಾಲಮೃತ್ಯುವ ಕೆಣಕಿದರಲ್ಲಿ || ೧೪ ||

ಕುಣಿಕುಣಿದಾಡುತ ಕೂಗಿ ಬೊಬ್ಬಿಡುತ
ಇಣಿಕಿನೋಡುತ ಅಸುರರನಣಕಿಸುತ
ಝಣಝಣಝಣರೆನೆ ಬಾಲದ ಗಂಟೆಯು
ಮನದಿ ಶ್ರೀರಾಮರ ಪಾದವ ನೆನೆಯುತ || ೧೫ ||

ಮಂಗಳಂ ಶ್ರೀರಾಮಚಂದ್ರಮೂರ್ತಿಗೆ
ಮಂಗಳಂ ಸೀತಾದೇವಿ ಚರಣಂಗಳಿಗೆ
ಮಂಗಳವೆನುತ ಲಂಕೆಯ ಸುಟ್ಟು
ಲಂಘಿಸಿ ಅಸುರನ ಗಡ್ದಕೆ ಹಿಡಿದ || ೧೬ ||

ಹತ್ತಿತು ಅಸುರನ ಗಡ್ಡ ಮೀಸೆಗಳು
ಸುತ್ತಿತು ಹೊಗೆ ಬ್ರಹ್ಮಾಂಡ ಕೋಟಿಯೊಳು
ಚಿತ್ತದಿ ರಾಮರು ಕೋಪಿಸುವರು ಎಂದು
ಚಿತ್ರದಿ ನಡೆದನು ಅರಸನಿದ್ದೆಡೆಗೆ || ೧೭ ||

ಸೀತೆಯ ಕ್ಷೇಮವ ರಾಮರಿಗ್ಹೇಳಿ
ಪ್ರೀತಿಯಿಂ ಕೊಟ್ಟ ಕುರುಹ ಕರದಲ್ಲಿ
ಸೇತುವೆ ಕಟ್ಟಿ ಚದುರಂಗ ಬಲಸಹ
ಮುತ್ತಿತು ಲಂಕೆಯ ಸೂರೆಗೈಯುತಲಿ || ೧೮ ||

ವೆಗ್ಗಳವಾಯಿತು ರಾಮರ ದಂಡು
ಮುತ್ತಿತು ಲಂಕೆಯ ಕೋಟೆಯ ಕಂಡು
ಹೆಗ್ಗದ ಕಾಯ್ವರ ನುಗ್ಗು ಮಾಡುತಿರೆ
ಝಗ್ಗನೆ ಪೇಳ್ದರು ರಾವಣಗಂದು || ೧೯ ||

ರಾವಣ ಮೊದಲಾದ ರಾಕ್ಷಸರ ಕೊಂದು
ಭಾವಶುದ್ಧದಲಿ ವಿಭೀಷಣ ಬಾಳೆಂದು
ದೇವಿ ಸೀತೆಯನೊಡಗೊಂಡಯೋಧ್ಯದಿ
ದೇವ ಶ್ರೀರಾಮರು ರಾಜ್ಯವಾಳಿದರು || ೨೦ ||

ಶಂಖದೈತ್ಯನ ಕೊಂದೆ ಶರಣು ಶರಣಯ್ಯ
ಶಂಖಗಿರಿಯಲಿ ನಿಂದೆ ಹನುಮಂತರಾಯ
ಪಂಕಜಾಕ್ಷ ಹಯವದನನ ಕಟಾಕ್ಷದಿ
ಬಿಂಕದಿ ಪಡೆದೆಯೋ ಅಜನಪದವಿಯ || ೨೧ ||