ಏಸು ಕಾಯಂಗಳ ಕಳೆದು

ರಚನೆಕಾರ: ಅಜ್ಞಾತ

ವರ್ಗ: ವಿಷ್ಣು

ಏಸು ಕಾಯಂಗಳ ಕಳೆದು ಎಂಭತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ |
ತಾನಲ್ಲ ತನ್ನದಲ್ಲ ಆಸೆ ಥರವಲ್ಲ ಮುಂದೆ ಬಾಹೊದಲ್ಲ |
ದಾಸನಾಗು ವಿಶೇಷನಾಗು || ಪ ||

ಆಶ-ಕ್ಲೇಶ-ದೋಷವೆಂಬೊ ಅಬ್ಧಿಯೊಳು ಮುಳುಗಿ ಯಮನ-
ಪಾಶಕ್ಕೊಳಗಾಗದೆ ನಿರ್ದೋಷಿಯಾಗೊ ಸಂತೋಷಿಯಾಗೊ |
ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರ
ಏಸು ದೇಶ ತಿರುಗಿದರೆ ಬಾಹೊದೇನೋ, ಅಲ್ಲಿ ಹೋಹೊದೇನೋ? |
ದೋಷನಾಶಿ ಕೃಷ್ಣವೇಣಿ ಗಂಗೆ ಗೋದಾವರೀ ಭವನಾಶಿ
ತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ |
ಮೀಸಲಾಗಿ ಮಿಂದು ಜಪ ತಪ ಹೋಮ ನೇಮಂಗಳ
ಏಸು ಬಾರಿ ಮಾಡಿದರೆ ಫಲವೇನೋ? ಈ ಛಲವೇನೋ? || ೧ ||

ಅಂದಿಗೊ ಇಂದಿಗೊ ಒಮ್ಮೆ ಸಿರಿ ಕಮಲೇಶನನ್ನು
ಒಂದು ಬಾರಿಯಾರೂ ಹಿಂದೆ ನೆನೆಯಲಿಲ್ಲ ಮನ ದಣಿಯಲಿಲ್ಲ |
ಬಂದು ಬಂದು ಭ್ರಮೆಗೊಂಡು ಮಾಯಾಮೋಹಕ್ಕೆ ಸಿಕ್ಕಿ
ನೊಂದು ಬೆಂದು ಒಂದರಿಂದ ಉಳಿಯಲಿಲ್ಲ ಬಂಧ ಕಳೆಯಲಿಲ್ಲ |
ಸಂದೇಹವ ಮಾಡದಿರು ಅರಿವು ಎಂಬ ದೀಪವಿಟ್ಟು
ಇಂದು ಕಂಡ್ಯ ದೇಹದಲ್ಲಿ ಪಿಂಡಾಂಡ ಹಾಗೆ ಬ್ರಹ್ಮಾಂಡ |
ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ ಮು-
ಕುಂದನಿಂದ ಮುಕ್ತಿ ಬೇಡು ಕಂಡ್ಯ ನೀ ನೋಡು ಕಂಡ್ಯ || ೨ ||

ನೂರು ಬಾರಿ ಶರಣು ಮಾಡಿ ನೀರಮುಳುಗಲ್ಯಾಕೆ
ಪರನಾರಿಯರ ನೋಟಕೆ ಗುರಿಯ ಮಾಡಿದಿ ಮನ ಸೆರೆಯ ಮಾಡಿದಿ |
ಸೂರೆಯೊಳು ಸೂರೆತುಂಬಿ ಮೇಲೆ ಮುತ್ತಿನ ಹಾರ
ಗೀರು-ಗಂಧ-ಅಕ್ಷತೆಯ ಧರಿಸಿದಂತೆ ನೀ ಮೆರೆಸಿದಂತೆ |
ಗಾರುಡಿಯ ಮತ ಬಿಟ್ಟು ನಾದಬ್ರಹ್ಮನ ಪಿಡಿದು
ಸಾರಿ ಸೂರಿ ಮುಕ್ತಿಯನ್ನು ಶಮದಿಂದ ಮತ್ತೆ ಸುಮನದಿಂದ |
ನಾರಾಯಣ ಅಚ್ಯುತ ಅನಂತಾದಿಕೇಶವನ
ಸಾರಾಮೃತವನುಂಡು ಸುಖಿಸೊ ಲಂಡ ಜೀವವೆ ಎಲೋ ಭಂಡ ಜೀವವೆ || ೩ ||