ಗಜಮುಖನೆ ಸಿದ್ಧಿದಾಯಕನೆ

ರಚನೆಕಾರ: ವ್ಯಾಸರಾಜ ತೀರ್ಥರು

ವರ್ಗ: ಗಣೇಶ

ಗಜಮುಖನೆ ಸಿದ್ಧಿದಾಯಕನೆ ವಂದಿಪೆ ಶರಣು || ಪ ||

ತ್ರಿಜಗ ವಂದಿತನಾದ ದೇವ ದೇವನೆ ಶರಣು
ಸುಜನರಿಗೆ ವಿಘ್ನವನು ಪರಿಹರಿಪೆ ಶರಣು || ಅ.ಪ. ||

ಮಂದ ಮತಿಯನು ಬಿಡಿಸಿ ಚಂದ ಸುಜ್ಞಾನ ವನಿತ್ತು
ಇಂದಿರೇಶನ ಪಾದ ಹೊಂದಿಪ್ಪ ತೆರದಿ
ಸುಂದರಾಂಗನೆ ನಿನ್ನ ಪದದ್ವಂದ್ವಕೆರಗುವೆನು
ಸಂದೇಹ ಮಾಡದಲೆ ಇಂದು ಕರುಣಿಪುದು || ೧ ||

ಹರನ ತನಯನೆ ಕರುಣಾಕರನೆ ಸುರನರ ವರದ
ಮೊರೆಯ ಲಾಲಿಸಿ ಎನ್ನ ಕರಗಳನೆ ಪಿಡಿದು
ಪೊರೆಯದಿದ್ದರೆ ಬಿಡೆನು ನೆರೆದೆ ನಿನ್ನಡಿಗಳನು
ತ್ವರಿಯದಿಂದಲಿ ನೋಡು ಶರಣೆಂಬೆ ನಿನಗೆ || ೨ ||

ಸಿದ್ಧಿದಾಯಕ ನಿನ್ನ ಹೊದ್ದಿ ಮೆರೆವೆನೊ ನಾನು
ಅಬ್ಧಿಶಯನನ ಮಹಿಮೆ ಶಬ್ದದಲಿ ಪೇಳ್ವ
ಶುದ್ಧಮತಿಯನು ಕೊಟ್ಟು ಉದ್ಧರಿಸಬೇಕೆನ್ನ
ಮಧ್ವವಲ್ಲಭ ವೇಣು ಕೃಷ್ಣಗತಿಪ್ರಿಯ || ೩ ||