ಗಿಳಿಯು ಪಂಜರದೊಳಿಲ್ಲ

ರಚನೆಕಾರ: ಪುರಂದರದಾಸರು

ವರ್ಗ: ಶ್ರೀರಾಮ

ಗಿಳಿಯು ಪಂಜರದೊಳಿಲ್ಲ
ಶ್ರೀ ರಾಮ ರಾಮಾ ಬರಿದು ಪಂಜರವಾಯಿತಲ್ಲಾ || ಪ ||

ಅಕ್ಕ ನಿನ್ನ ಮಾತು ಕೇಳಿ
ಚಿಕ್ಕದೊಂದು ಗಿಳಿಯ ತಂದು ಸಾಕಿದೆ
ಅಕ್ಕ ನಾನಿಲ್ಲದ ವೇಳೆ
ಬೆಕ್ಕು ಕೊಂಡು ಹೋಯಿತಯ್ಯೋ || ೧ ||

ಆರ್ತಿಗೊಂದು ಗಿಳಿಯ ಸಾಕಿದೆ
ಮುತ್ತಿನ ಹಾರವ ಹಾಕಿದೆ
ಮುತ್ತುಗೊಂಡು ಗಿಳಿಯು ತಾನು
ಎತ್ತ ಓಡಿ ಹೋಯಿತಯ್ಯೋ || ೨ ||

ಹಸಿರು ಬಣ್ಣದ ಗಿಳಿಯು
ಕುಶಲ ಬುದ್ಧಿಯ ಗಿಳಿಯು
ಅಸುವ ಕುಂದಿ ಗಿಳಿಯು ತಾನು
ಹಸನಗೆಡಿಸಿ ಹೋಯಿತಯ್ಯೋ || ೩ ||

ಮುಪ್ಪಾಗದ ಬೆಣ್ಣೆಯನು
ತಪ್ಪದೇ ನಾ ಹಾಕಿದೆ ಸಾಕಿದೆ
ಒಪ್ಪದಿಂದ ಗಿಳಿಯು ಈಗ
ತೆಪ್ಪನೇ ಹಾರಿ ಹೋಯಿತಯ್ಯೋ || ೪ ||

ರಾಮ ರಾಮ ಎಂಬೋ ಗಿಳಿ
ಕೋಮಲ ಕಾಯದ ಗಿಳಿ
ಸಾಮಜಪೋಷಕ ತಾನು
ಪ್ರೇಮದಿ ಸಾಕಿದ ಗಿಳಿ || ೫ ||

ಒಂಬತ್ತು ಬಾಗಿಲ ಮನೆ
ತುಂಬುವ ಸಂದಣಿಯಿರಲು
ಕುಂಭ ಮುರಿದು ಡಿಂಭ ಬಿದ್ದು
ಅಂಬರಕೆ ಹಾರಿತಯ್ಯೋ || ೬ ||

ಅಂಗೈಯಲಾಡುವ ಗಿಳಿ
ಮುಂಗೈಯ ಮೇಲಣ ಗಿಳಿ
ಗಾ ಪುರಂದರವಿಠಲನಂತ
ರಂಗದಿ ಭಜಿಸುವ ಗಿಳಿ || ೭ ||