ಗೋವಿಂದ ಹರಿ ಗೋವಿಂದ

ರಚನೆಕಾರ: ಕನಕದಾಸರು

ವರ್ಗ: ವಿಷ್ಣು

ಗೋವಿಂದ ಹರಿ ಗೋವಿಂದ
ಗೋವಿಂದ ಪರಮಾನಂದ ಮುಕುಂದ || ಪ ||

ಮಚ್ಛ್ಯಾವತಾರದೊಳಾಳಿದನೆ – ಮಂದರಾಚಲ ಬೆನ್ನೊಳು ತಾಳಿದನೆ
ಅಚ್ಛ ಸೂಕರನಾಗಿ ಬಾಳಿದನೆ – ಮದ ಹೆಚ್ಚೆ ಹಿರಣ್ಯಕನ ಸೀಳಿದನೆ || ೧ ||

ಕುಂಭಿನಿ ದಾನವ ಬೇಡಿದನೆ – ಕ್ಷಾತ್ರರೆಂಬುವರನು ಹತ ಮಾಡಿದನೆ
ಅಂಬುಧಿಗೆ ಶರ ಹೂಡಿದನೆ – ಕಮಲಾಂಬಕ ಗೊಲ್ಲರೊಳಾಡಿದನೆ || ೨ ||

ವಸುದೇವನುದರದಿ ಪುಟ್ಟಿದನೆ – ಪಲ್ಮಸೇವ ದನುಜರೊಡೆಗುಟ್ಟಿದನೆ
ಎಸೆವ ಕಾಳಿಂಗನ ಮೆಟ್ಟಿದನೆ – ಬಾಧಿಸುವರ ಯಮಪುರ ಕಟ್ಟಿದನೆ || ೩ ||

ಪೂತನಿಯ ಮೈ ಸೋಕಿದನೆ – ಬಲು ಘಾತದ ಮೊಲೆಯುಂಡು ತೇಕಿದನೆ
ಘಾತಕಿಯನತ್ತ ನೂಕಿದನೆ – ಗೋಪವ್ರಾತ ಗೋಗಳನೆಲ್ಲ ಸಾಕಿದನೆ || ೪ ||

ಸಾಧಿಸಿ ತ್ರಿಪುರರ ಗೆಲಿದವನೆ – ಮ್ಲೇಚ್ಛರ ಛೇದಿಸೆ ಹಯವೇರಿ ಕೆಲೆದವನೆ
ಸಾಧುಸಂತರೊಡನೆ ನಲಿದವನೆ – ಬಾಡದಾದಿಕೇಶವ ಕನಕಗೊಲಿದವನೆ || ೫ ||