ಹಲವು ಜೀವನವ ಒಂದೆಲೆ ನುಂಗಿತು

ರಚನೆಕಾರ: ಕನಕದಾಸರು

ವರ್ಗ: ಉಪದೇಶಾತ್ಮಕ

ಹಲವು ಜೀವನವ ಒಂದೆಲೆ ನುಂಗಿತು
ಕಾಗಿನೆಲೆಯಾದಿಕೇಶವನು ಬಲ್ಲನೀ ಬೆಡಗ || ಪ ||

ಹರಿಯ ನುಂಗಿತು ಹರ ಬ್ರಹ್ಮರ ನುಂಗಿತು ಸುರರಿಗುಂಟಾದ ದೇವರ ನುಂಗಿತು
ಉರಿಗಣ್ಣ ಶಿವನ ಒಂದೆಲೆ ನುಂಗಿತೋ ದೇವ
ಹರಿಯ ಬಳಗವ ಒಂದೆಲೆ ನುಂಗಿತು || ೧ ||

ಎಂಟುಗಜವನು ನುಂಗಿ ಕಂಟಕರೈವರ ನುಂಗಿ
ಉಂಟಾದ ಗಿರಿಯ ತಲೆಯ ನುಂಗಿತು
ಕಂಟವ ಪಿಡಿದ ಬ್ರಹ್ಮನ ನುಂಗಿತೆಲೊ ದೇವ
ಎಂಟಾರು ಲೋಕ ಒಂದೆಲೆ ನುಂಗಿತು || ೨ ||

ಗಿಡವ ನುಂಗಿತು ಗಿಡದೊಡತೊಟ್ಟ ನುಂಗಿತು
ಗಿಡದ ತಾಯಿ ತಂದೆಯ ನುಂಗಿತು
ಬೆಡಗ ಬಲ್ಲರೆ ಪೇಳಿ ಬಾಡ ಕನಕದಾಸ
ನೊಡೆಯಾದಿಕೇಶವನ ಬಲ್ಲನೀ ಬೆಡಗ || ೩ ||