ಹರೇ ವೆಂಕಟಶೈಲ ವಲ್ಲಭ

ರಚನೆಕಾರ: ಶ್ರೀಪಾದರಾಜರು

ವರ್ಗ: ಶ್ರೀನಿವಾಸ

ಹರೇ ವೆಂಕಟಶೈಲ ವಲ್ಲಭ
ಪೊರೆಯಬೇಕು ಎನ್ನ || ಪ ||

ದುರಿತದೂರ ನೀನಲ್ಲದೆ ಧರೆಯೊಳು
ಪೊರೆವರ ನಾ ಕಾಣೆ ನಿನ್ನಾಣೆ || ಅ.ಪ. ||

ಆರು ನಿನ್ನ ಹೊರತೆನ್ನ ಪೊರೆವರು
ನೀರಜಾಕ್ಷ ಹರಿಯೆ ಅ-
ಪಾರಮಹಿಮ ಪುರಾಣಪುರುಷ
ಘೋರ ದುರಿತಗಳ ದೂರ ಮಾಡಿಸೋ || ೧ ||

ಇಂದಿರೇಶ ಅರವಿಂದನಯನ ಎನ್ನ
ತಂದೆ ತಾಯಿ ನೀನೆ
ಹೊಂದಿದವರ ಅಘವೃಂದ ಕಳೆವ
ಮಂದರಾದ್ರಿಧರನೇ ಶ್ರೀಧರನೆ || ೨ ||

ಮಂಗಳಾಂಗ ಮಹನೀಯ ಗುಣಾರ್ಣವ
ಗಂಗೋದಿತ ಪಾದ
ಅಂಗಜಪಿತ ಅಹಿರಾಜಶಯ್ಯ ಶ್ರೀ
ರಂಗವಿಠಲ ದೊರೆಯೇ ಶ್ರೀ ಹರಿಯೇ || ೩ ||