ಹರಿ ನೀನೆ ಗತಿಯೆಂದು

ರಚನೆಕಾರ: ಪುರಂದರದಾಸರು

ಗಾಯನ: ಅಪೂರ್ವ ಶ್ರೀಕುಮಾರ್

ವರ್ಗ: ವಿಷ್ಣು

ಹರಿ ನೀನೆ ಗತಿಯೆಂದು ನೆರೆ ನಂಬಿದವರನು
ಮರೆತಿರುವುದು ನ್ಯಾಯವೆ || ಪ ||

ಗರುಡಗಮನ ನೀ ಸಿರಿಲೋಲನಾಗಿರೆ |
ಅರಸಿ ಎನ್ನನು ಕಾಯ್ವ ದೊರೆಗಳಿನ್ನಾರಯ್ಯ || ಅ.ಪ. ||

ಮುಟ್ಟಿ ಪೂಜಿಸಿ ನಿನ್ನ ಇಷ್ಟವ ಬೇಡುವ |
ದೃಷ್ಟಿ ಎನ್ನೊಳಗಿದೆಯೇ |
ಕಷ್ಟವ ಪಡಲಾರೆ ಸೃಷ್ಟಿಯೊಳಗೆ ಎನ್ನ |
ದುಷ್ಟಕರ್ಮವ ಬಿಡಿಸಿ ದಿಟ್ಟನೆಂದೆನಿಸೋ || ೧ ||

ಭುಜಗಶಯನ ನಿನ್ನ ಭಕ್ತರ ಹೃದಯದಿ |
ನಿಜವಾಗಿ ನೀನಿಲ್ಲವೆ |
ಅಜನ ಪಿತನೆ ಕೇಳು ತ್ರಿಜಗವೆಲ್ಲವು ನಿನ್ನ |
ಸುಜನಪಾಲಕನೆಂದು ಭಜನೆ ಮಾಳ್ಪುದು ಕಂಡು || ೨ ||

ಧರಣಿಯೊಳು ನೀ ಸುಜನರ ಸಲಹುವ |
ಬಿರುದು ಪಡೆದವನು ನೀನಲ್ಲವೇ |
ಸಿರಿರಮಣನೆ ಎನ್ನ ಕರುಣದಿಂದಲಿ ಕಾಯೋ |
ಪರಮಪುರುಷ ಸಿರಿ ಪುರಂದರವಿಠಲ || ೩ ||