ಇಂದಿನಿರುಳಿನ ಕನಸಿನಲ್ಲಿ

ರಚನೆಕಾರ: ಶ್ರೀಪಾದರಾಜರು

ವರ್ಗ: ಶ್ರೀಕೃಷ್ಣ

ಇಂದಿನಿರುಳಿನ ಕನಸಿನಲ್ಲಿ ಬಂದು
ಮುಂದೆ ನಿಂದುದ ಕಂಡೆನೆ ಗೋವಳನ || ಪ ||

ಆಣಿಮುತ್ತಿನ ವೆಂಡೆಯದ ಕಾಲಂದುಗೆ ಗೆಜ್ಜೆ
ಜಾಣನಂಗಜನ ಪಿತನ ಕೈಯ ವೇಣು
ಮಾಣಿಕ್ಯದ ಕಂಕಣ ಹೊನ್ನುಡಿ ಘಂಟೆ
ವಾಣಿಯ ರಚನೆ ಎಲ್ಲಿ[ಯು] ಈ ಗೋವಳನಾ || ೧ ||

ಮೊಲ್ಲೆ ಮಲ್ಲಿಗೆ ಚೊಲ್ಲೆಯದ ಚಲ್ಲಣದ ಶಿರ-
ದಲ್ಲಿ ಗುಂಜಿಯ ದಂಡೆಯ ಚೆಲ್ವ ಕಂಗಳ
ಗೋಪಿಯರ ಮೇಲೆ ಕಡೆಗಣ್ಣ
ಚೆಲ್ಲುತೊಯ್ಯನೆ ನಡೆದ ಗೋವಳನ || ೨ ||

ತಿತ್ತಿ ಮೌರಿ ಕೊಂಬು ಸುತ್ತಿದ ಕತ್ತ ತಾವಿಲಿ
ತುತ್ತುರೂ ತೂರು ತೂರೆನುತ
ಚಿತ್ತವ ಮರುಳು ಮಾಡಿದನೆ ಪೊಂಗೊಳಲೂದಿ
ಮೊತ್ತದ ಗೋಪಿಯರನೆಲ್ಲ ಗೋವಳನ || ೩ ||

ಎಸಳುಕಂಗಳ ಢಾಳ ಶಶಿ ನೊಸಲ ತಿಲಕ
ಎಸೆವ ಬಿಂಬಾಧರದ
ಪೊಸ ಮುತ್ತಿನೋಲೆ ಮೂಕುತಿ ಹೊನ್ನುಡಿ ಘಂಟೆ
ಎಸೆವ ನೂಪುರ ಹಾಹೆಯ(?) ಗೋವಳನ || ೪ ||

ಉಂಗುಟದಲಿ ಗಂಗೆಯಂಗಾಲಲವುಂಕೆ
ತುಂಗವಕ್ಷದ ಲಕ್ಷುಮೀ
ಮಂಗಳ ಮಹಿಮ ಭುಜಂಗಶಯನ ಸಿರಿ
ರಂಗವಿಠಲ ನೆರೆದ ಗೋವಳನ || ೫ ||