ಇಂದು ಸೈರಿಸಿರಿ ಶ್ರೀಕೃಷ್ಣನ ತಪ್ಪ

ರಚನೆಕಾರ: ಕನಕದಾಸರು

ವರ್ಗ: ಶ್ರೀಕೃಷ್ಣ

ಇಂದು ಸೈರಿಸಿರಿ ಶ್ರೀಕೃಷ್ಣನ ತಪ್ಪ
ಮುಂದಕೆ ನಿಮ್ಮ ಮನೆಗೆ ಬಾರನಮ್ಮ || ಪ ||

ಮಗುವು ಬಲ್ಲುದೆ ಇಷ್ಟು ಬೆಣ್ಣೆಯ ಕದ್ದರೆ
ಬಿಗಿಯಬಹುದೇ ಶ್ರೀಚರಣವನು
ಅಗಣಿತ ಮಹಿಮನ ಅಂಜಿಸಲೇಕಮ್ಮ
ಬಗೆಯ ಬಾರದೆ ನಿಮ್ಮ ಮಕ್ಕಳಂತೆ || ೧ ||

ಹಸುಮಗುವನು ಕಂಡು ಮುದ್ದಿಸಲೊಲ್ಲದೆ
ಹುಸಿಗ ಕಳ್ಳನೆಂದು ಕಟ್ಟುವಿರಿ
ವಸುಧೆಯೊಳಗೆ ನಾನೊಬ್ಬಳೆ ಪಡೆದೆನೆ ನಿಮ್ಮ
ಹಸುಮಗುವಿನಂತೆ ಭಾವಿಸಬಾರದೆ || ೨ ||

ಎಷ್ಟು ಸಾರಿಯು ನಾ ಬೇಡವೆಂದರೆ ಕೇಳದು
ದುಷ್ಟ ಮಕ್ಕಳ ಕೂಡೆ ಒಡನಾಟವ
ಕಟ್ಟಿದ ನೆಲುವಿನ ಬೆಣ್ಣೆಯನೀವೆನು
ಬಿಟ್ಟು ಕಳುಹಿರಮ್ಮ ಆದಿಕೇಶವನ || ೩ ||