ಇಷ್ಟು ದಿನ ಈ ವೈಕುಂಠ

ರಚನೆಕಾರ: ಕನಕದಾಸರು

ವರ್ಗ: ಶ್ರೀನಿವಾಸ

ಇಷ್ಟು ದಿನ ಈ ವೈಕುಂಠ
ಎಷ್ಟು ದೂರವೊ ಎನ್ನುತಲಿದ್ದೆ
ದೃಷ್ಟಿಯಿಂದಲಿ ನಾನು ಕಂಡೆ
ಸೃಷ್ಟಿಗೀಶನೆ ಶ್ರೀರಂಗಶಾಯಿ || ಪ ||

ಎಂಟು ಏಳನು ಕಳೆದುದರಿಂದೆ
ಭಂಟರೈವರ ತುಳಿದುದರಿಂದೆ
ತುಂಟಕನೊಬ್ಬನ ತರಿದುದರಿಂದೆ
ಭಂಟನಾಗಿ ಬಂದೆನೋ ರಂಗಶಾಯಿ || ೧ ||

ವಜ್ರ ವೈಢೂರ್ಯದ ತೊಲೆಗಳ ಕಂಡೆ
ಪ್ರಜ್ವಲಿಪ ಮಹಾದ್ವಾರವ ಕಂಡೆ
ನಿರ್ಜರಾದಿ ಮುನಿಗಳ ನಾ ಕಂಡೆ
ದುರ್ಜನಾಂತಕನೆ ಶ್ರೀರಂಗಶಾಯಿ || ೨ ||

ರಂಭೆ ಊರ್ವಶಿ ಮೇಳವ ಕಂಡೆ
ತುಂಬುರು ಮುನಿ ನಾರದರನು ಕಂಡೆ
ಅಂಬುಜೋದ್ಭವ ರುದ್ರರ ಕಂಡೆ
ಶಂಬರಾರಿ ಪಿತನೆ ರಂಗಶಾಯಿ || ೩ ||

ನಾಗಶಯನನ ಮೂರ್ತಿ ಕಂಡೆ
ಭೋಗಿಭೂಷಣ ಶಿವನನು ಕಂಡೆ
ಭಾಗವತರ ಸಮ್ಮೇಳವ ಕಂಡೆ
ಕಾಗಿನೆಲೆಯಾದಿ ಕೇಶವನ ನಾ ಕಂಡೆ || ೪ ||