ಜಪವ ಮಾಡಿದರೇನು ತಪವ ಮಾಡಿದರೇನು

ರಚನೆಕಾರ: ಕನಕದಾಸರು

ವರ್ಗ: ಉಪದೇಶಾತ್ಮಕ

ಜಪವ ಮಾಡಿದರೇನು ತಪವ ಮಾಡಿದರೇನು
ವಿಪರೀತ ಕಪಟಗುಣ ಕಲುಷವಿದ್ದವರು || ಪ ||

ಆದಿಗುರುವರಿಯದೆ ಅತ್ತಲಿತ್ತಲು ತೊಳಲಿ
ವೇದಶಾಸ್ತ್ರವನೋದಿ ಬಾಯಾರಲು
ಹಾದಿಯನು ಕಾಣದಂತಿರುತಿರ್ದು ಹಲವೆಂಟು
ವಾದ ತರ್ಕದೊಳಿದ್ದ ಭೇದವಾದಿಗಳು || ೧ ||

ನುಡಿ ನಡೆವ ಕಾಲದಲಿ ದಾನ ಮಾಡದೆ ಇರಲು
ಅಡವಿಯೊಳು ಕೆರೆ ತುಂಬಿ ಬತ್ತಿದಂತೆ
ಮಡದಿ ಮಕ್ಕಳಿಗೆಂದು ಒಡವೆ ವಸ್ತ್ರವ ಗಳಿಸೆ
ಹಿಡಿಯಲಾ ಯಮನವರ ಕಟ್ಟಿಗೊಳಗಾಗಿ || ೨ ||

ಚಳಿಮಳೆಯ ಅತಿ ಕಾರುಗತ್ತಲೆಯೊಳಗೆ ಎದ್ದು
ಹೊಳೆಯೊಳಗೆ ಮುಳುಗಿ ಜಪ ತಪವ ಮಾಡಿ
ಕಳವಳಿಸಿ ನೂರೆಂಟು ಹಲುಬಿ ಬಳಲಲು ಬೇಡ
ನಳಿನಾಕ್ಷ ಆದಿಕೇಶವನ ನೆನೆ ಮನವೆ || ೩ ||