ಜಯಮಂಗಲಂ ನಿತ್ಯ ಶುಭಮಂಗಲಂ

ರಚನೆಕಾರ: ಕನಕದಾಸರು

ವರ್ಗ: ಮಂಗಳಂ

ಜಯಮಂಗಲಂ ನಿತ್ಯ ಶುಭಮಂಗಲಂ || ಪ ||

ವಾತಜಾತನು ಆಗಿ ಖ್ಯಾತಿಯಲಿ ಮೆರೆದಗೆ
ಸೇತುವೆಯ ಭರದಿಂದ ಲಂಘಿಸಿದಗೆ
ಸೀತೆಯನು ವಂದಿಸುತೇ ಉಂಗುರವನಿತ್ತವಗೆ
ದೈತ್ಯಪುರವನು ಭರದಲುರಿಸಿದವಗೆ || ೧ ||

ವಸುಧೆಯಲಿ ಕುಂತಿನಂದನನಾಗಿ ಉದಿಸಿದಗೆ
ಕುಸುಮವನು ತಂದು ದ್ರೌಪದಿಗಿತ್ತಗೆ
ಕುಶಲತನದಲಿ ಕೌರವಾದಿಗಳ ಸಂಹರಿಸಿ
ಅಸಹಾಯ ವೀರ ಶ್ರೀ ಭೀಮಸೇನಗೆ || ೨ ||

ಮಧ್ಯಗೃಹದಾತನಾ ಸತಿಯಲ್ಲಿ ಉದಿಸಿದಗೆ
ಬೌದ್ಧ ಚಾರ್ವಾಕ ಮಾಯ್ಗಳ ಜರಿದಗೆ
ಮಧ್ವಶಾಸ್ತ್ರವನೆಲ್ಲ ಸಜ್ಜನರಿಗೊರೆದಗೆ
ಮುದ್ದು ಶ್ರೀ ಆದಿಕೇಶವನ ಭಜಕಗೆ || ೩ ||