ಜೋ ಜೋ ರಂಗಧಾಮ

ರಚನೆಕಾರ: ಶ್ರೀಪಾದರಾಜರು

ವರ್ಗ: ಶ್ರೀಕೃಷ್ಣ

ಜೋ ಜೋ ಜೋ ಜೋ ಜೋ ರಂಗಧಾಮ ಜೋ
ಜೋ ಜೋ ಜೋ ಜೋ ರಣಭೀಮ || ಪ ||

ಜೋ ಜೋ ಭಕ್ತರ ಕಷ್ಟನಿರ್ಧೂಮ
ಜೋ ಜೋ ದಶರಥ ರಾಮ ನಿಸ್ಸೀಮ || ಅ.ಪ. ||

ಭೂಮಿಯ ಚಿನ್ನದ ತೊಟ್ಟಿಲ ಮಾಡಿಸೋ
ಮಸೂರ್ಯರೆಂಬ ಕಲಶವ ಹೂಡಿ
ನೇಮದಿ ವೇದಗಳ ಸರಪಣಿ ಮಾಡಿ
ಆ ಮಹಾಕಾಶಕ್ಕೆ ಕೊಂಡಿಗಳ ಹಾಕಿ || ೧ ||

ಸರಸಿಜೋದ್ಭವ ಸರಸ್ವತಿ ಭಾರತಿ
ಗರುಡ ಶೇಷ ರುದ್ರರಿವರ ಸತಿಯರು
ಸುರರ ಕಿನ್ನರರು ಕಿಂಪುರುಷ ನಾರದರು
ಪರಿಪರಿ ಗೀತದಿ ತುತಿಸಿ ಪಾಡಿದರು || ೨ ||

ವಸುದೇವಸುತನಾದ ಮುದ್ದುಮುರಾರಿ
ಅಸುರೆ ಪೂತನಿಯ ಪ್ರಾಣಾಪಹಾರಿ
ಅಸಮ ಸಾಹಸಮಲ್ಲ ದೈತ್ಯರ ವೈರಿ
ಶಿಶುವಾಗಿ ದೇವಕೀಗಾನಂದ ತೋರಿ || ೩ ||

ಜಗವನು ಹೊಟ್ಟೆಯೊಳಿಂಬಿಟ್ಟೆ ತ್ರುವ್ವಿ
ಜಗವೆಲ್ಲ ನಿರ್ಮಾಣ ಮಾಡಿದೆ ತ್ರುವ್ವಿ
ನಿಗಮಗೋಚರ ನಿತ್ಯಾನಂದನೆ ತ್ರುವ್ವಿ
ಮಗುವೆಂದು ನಾವ್ ತೂಗಬಲ್ಲೆವೆ ತ್ರುವ್ವಿ || ೪ ||

ತಮನ ಮರ್ದಿಸಿ ವೇದತತಿಗಳನು ತಂದೆ
ಸುಮನಸರಿಗಾಗಿ ಮಂದರಪೊತ್ತು
ನಿಂದೆಕ್ಷಮೆಗಾಗಿ ಪೋಗಿ ಹಿರಣ್ಯಕನ ಕೊಂದೆ
ನಮಿಸಿ ಕರೆದರೆ ಕಂಬದಿಂದ್ಹೊರಟು ಬಂದೆ || ೫ ||

ತರಳನಾಗಿ ಬಲಿಯ ದಾನವ ಬೇಡ್ದೆ
ಪರಶು ಧರಿಸಿ ಕ್ಷತ್ರಿಯರ ಸವರಿದೆ
ದುರುಳ ರಾವಣನ ಶಿರವ ಚೆಂಡಾಡಿದೆ
ಚರಿಸಿ ಮನೆಗಳ ಪಾಲ ಮೊಸರನ್ನು ಕುಡಿದೆ || ೬ ||

ಬುದ್ಧನಾಗಿ ಪತಿವ್ರತೆರನಾಳಿದೆ ಯಲ್ಲ
ಮುದ್ದು ತುರಗವನೇರಿ ಕಲ್ಕ್ಯನಾದ್ಯಲ್ಲ
ಪದ್ಮನಾಭ ಸರಿ ಭಕ್ತವತ್ಸಲ
ನಿದ್ರೆಯ ಮಾಡಯ್ಯ ಶ್ರೀ ರಂಗವಿಠಲ || ೭ ||