ಕಾಳಬೆಳದಿಂಗಳು ಈ ಸಂಸಾರ

ರಚನೆಕಾರ: ಶ್ರೀಪಾದರಾಜರು

ವರ್ಗ: ಉಪದೇಶಾತ್ಮಕ

ಕಾಳಬೆಳದಿಂಗಳು ಈ ಸಂಸಾರ ಕತ್ತಲೆ ಬೆಳದಿಂಗಳು || ಪ ||

ಸತ್ಯಕ್ಕೆ ಧರ್ಮನು ಲೆತ್ತವನಾಡಲು
ಅರ್ಧ ಭಾಂಡಾರವೆಲ್ಲವ ಸೋತು
ಮತ್ತೆ ವಿರಾಟರಾಯನ ಮನೆಯಲ್ಲಿ
ತೊತ್ತಾದಳು ದ್ರೌಪದಿ ಒಂದು ವರುಷ || ೧ ||

ಪುಂಡರೀಕಾಕ್ಷ ಪುರುಷೋತ್ತಮ ಹರಿಯು
ಬಂಡಿಬೋವನಾದ ಪಾರ್ಥನಿಗೆ ಭೂ –
ಮಂಡಲನಾಳುವ ಹರಿಶ್ಚಂದ್ರರಾಯನು
ಕೊಂಡವ ಕಾಯಿದನು ಹೊಲೆಯನಾಳಾಗಿ || ೨ ||

ಉಂಟಾದ ಕಾಲಕ್ಕೆ ನೆಂಟರು ಇಷ್ಟರು
ಬಂಟರಾಗಿ ಬಾಗಿಲ ಕಾಯ್ವರು
ಉಂಟಾದತನ ತಪ್ಪಿ ಬಡತನ ಬಂದರೆ
ಒಂಟೆಯಂತೆ ಗೋಣ ಮೇಲೆತ್ತುವರು || ೩ ||

ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ
ಬೆಂಬಲದಲಿ ನಲಿನಲಿವುತಿಹರು
ಬೆಂಬಲತನ ತಪ್ಪಿ ಬಡತನ ಬಂದರೆ
ಇಂಬು ನಿನಗಿಲ್ಲ ನಡೆಯೆಂಬರು || ೪ ||

ಏರುವ ದಂಡಿಗೆ ನೂರಾಳು ಮಂದಿಯು
ಮೂರುದಿನದ ಭಾಗ್ಯವು ಝಣಝಣವು
ನೂರಾರು ಸಾವಿರ ದಂಡವ ತೆತ್ತರೆ
ರಂಗವಿಠಲನನೆ ಸರಿಯೆಂಬೊರಯ್ಯ || ೫ ||