ಕಲಿಯುಗದೊಳು ಹರಿನಾಮವ ನೆನೆದರೆ

ರಚನೆಕಾರ: ಪುರಂದರದಾಸರು

ವರ್ಗ: ವಿಷ್ಣು

ಕಲಿಯುಗದೊಳು ಹರಿನಾಮವ ನೆನೆದರೆ
ಕುಲಕೋಟಿಗಳು ಉದ್ಧರಿಸುವುವು ರಂಗಾ || ಪ ||

ಸುಲಭದ ಭಕುತಿಗೆ ಸುಲಭನೆಂದೆನಿಸುವ
ಜಲರುಹನಾಭನ ನೆನೆಮನವೆ || ಅ.ಪ ||

ಸ್ನಾನವನರಿಯೆ ಮೌನವನರಿಯೆ
ಧ್ಯಾನವನರಿಯೆನೆಂದು ಎನಬೇಡ
ಜಾನಕೀವಲ್ಲಭ ದಶರಥನಂದನ
ಗಾನವಿಲೋಲನ ನೆನೆಮನವೆ || ೧ ||

ಜಪವೊಂದರಿಯೆ ತಪವೊಂದರಿಯೆ
ಉಪದೇಶವಿಲ್ಲೆಂದೆನಬೇಡ
ಅಪಾರಮಹಿಮ ಶ್ರೀಪುರಂದರವಿಠಲನ
ಉಪಾಯದಿಂದಲಿ ನೆನೆಮನವೆ || ೨ ||