ಕಂಡು ಕಂಡು ನೀ ಎನ್ನ

ರಚನೆಕಾರ: ಪುರಂದರದಾಸರು

ಗಾಯನ: ಶಶಿಕಾಂತ ರಾವ್

ವರ್ಗ: ಶ್ರೀಕೃಷ್ಣ

ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣ
ಪುಂಡರೀಕಾಕ್ಷ ಶ್ರೀ ಪುರುಷೋತ್ತಮ || ಪ ||

ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ
ನಿಂದೆಯಲಿ ನೊಂದೆನೈಯ್ಯ ನೀರಜಾಕ್ಷ
ತಂದೆತಾಯಿಯು ನೀನೆ ಬಂಧುಬಳಗವು ನೀನೆ
ಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣಾ || ೧ ||

ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ
ಎಣಿಸಲಾರದ ಭವದಿ ಕಡುನೊಂದೆ ನಾನು
ಸನಕಾದಿಮುನಿವಂದ್ಯ ವನಜಸಂಭವ ಜನಕ
ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಕೃಷ್ಣಾ || ೨ ||

ಭಕ್ತವತ್ಸಲನೆಂಬ ಬಿರುದು ಪೊತ್ತಾ ಮೇಲೆ
ಭಕ್ತರಾಧೀನನಾಗಿ ಇರಬೇಡವೆ
ಮುಕ್ತಿದಾಯಕ ನೀನು ಹೊನ್ನೂರುಪುರವಾಸ
ಶಕ್ತಗುರು ಪುರಂದರವಿಠಲ ಶ್ರೀಕೃಷ್ಣಾ || ೩ ||