ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ

ರಚನೆಕಾರ: ಶ್ರೀಪಾದರಾಜರು

ವರ್ಗ: ವಿಷ್ಣು

ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ ಜ || ಪ ||

ಗಂಗಳೊಳಗೆ ಮಂಗಳ ಮೂರುತಿ
ರಂಗನ ಶ್ರೀಪಾದಂಗಳ ನೋಡದ || ಅ. ಪ. ||

ಎಂದಿಗಾದರೊಮ್ಮೆ ಜನರು
ಬಂದು ಭೂಮಿಯಲಿ ನಿಂದು
ಚಂದ್ರಪುಷ್ಕರಣಿ ಸ್ನಾನವ ಮಾಡಿ ಆ-
ನಂದದಿಂದಲಿ ರಂಗನ ನೋಡದ || ೧ ||

ಹರಿಪಾದೋದಕ ಸಮ ಕಾವೇರಿ
ವಿರಜಾನದಿ ಸ್ನಾನವ ಮಾಡಿ
ಪರಮ ವೈಕುಂಠ ರಂಗಮಂದಿರ
ಪರವಾಸುದೇವನ ನೋಡದ || ೨ ||

ಹಾರ ಹೀರ ವೈಜಯಂತಿ
ತೋರ ಮುತ್ತಿನ ಹಾರವ ಧರಿಸಿ
ತೇರನೇರಿ ಬೀದಿಲಿ
ಮೆರೆವ ರಂಗವಿಠಲನ ನೋಡದ || ೩ ||