ಕರುಣಿಸೋ ರಂಗ

ರಚನೆಕಾರ: ಪುರಂದರದಾಸರು

ವರ್ಗ: ಶ್ರೀಕೃಷ್ಣ

ಕರುಣಿಸೋ ರಂಗ ಕರುಣಿಸೋ ಕೃಷ್ಣ
ಕರುಣಿಸೋ ರಂಗ ಕರುಣಿಸೋ || ಪ ||

ಹಗಲು ಇರುಳು ನಿನ್ನ ಸ್ಮರಣೆ
ಮರೆಯದಂತೆ || ಅ.ಪ ||

ರುಕುಮಾಂಗದನಂತೆ ವ್ರತವ ನಾನರಿಯೆ
ಶುಕಮುನಿಯಂತೆ ಸ್ತುತಿಸಲು ಅರಿಯೆ
ಬಕವೈರಿಯಂತೆ ಧ್ಯಾನವ ಮಾಡಲರಿಯೆ
ದೇವಕಿಯಂತೆ ಮುದ್ದಿಸಲೂ ಅರಿಯೆನೋ || ೧ ||

ಗರುಡನಂದದಿ ಪೊತ್ತು ತಿರುಗಲು ಅರಿಯೆ
ಕರಿಯಲು ಅರಿಯೆ ಕರಿರಾಜನಂತೆ
ವರಕಪಿಯಂತೆ ದಾಸ್ಯವ ಮಾಡಲರಿಯೆ
ಸಿರಿಯಂತೆ ನೆರೆದು ಮೋಹಿಸಲು ಅರಿಯೆನೋ || ೨ ||

ಬಲಿಯಂತೆ ದಾನವ ಕೊಡಲು ಅರಿಯೆ
ಭಕ್ತಿ ಛಲವನು ಅರಿಯೆ ಪ್ರಹ್ಲಾದನಂತೆ
ವರಿಸಲು ಅರಿಯೆ ಅರ್ಜುನನಂತೆ ಸಖನಾಗಿ
ಸಲಹೋ ದೇವರ ದೇವ ಶ್ರೀ ಪುರಂದರ ವಿಠ್ಠಲ || ೩ ||