ಕಾಯೆ ದುರ್ಗಾಂಭ್ರಣಿಯೆ

ರಚನೆಕಾರ: ಶ್ಯಾಮಸುಂದರ ದಾಸರು

ವರ್ಗ: ಪಾರ್ವತಿ

ಕಾಯೆ ದುರ್ಗಾಂಭ್ರಣಿಯೆ | ಕಾಯೆ ಶ್ರೀ ರುಕ್ಮಿಣಿಯೆ
ಕಾಯೆ ಕಾಯೆ ಶುಭ ಕಾಯೆ ದಯದಿ ಹರಿ
ಕಾಯ ನಿಲಯೆ ವಿಧಿ ಕಾಯಜ ತಾಯೆ || ಪ ||

ಮಾಕುಮತಿ ಶ್ರೀಕರಳೆ | ಪೋತನ ನುಡಿ ಕೇಳೆ
ಭೀಕರಳೆನಿಸುತ | ವ್ಯಾಕುಲಗೊಳಿಸದೆ
ನೀ ಕರುಣಿಸು ರತ್ನಾಕರನ ಮಗಳೆ || ೧ ||

ಸೀತೆ ಸಾರಸನಯನೆ | ಶೀತಾಂಶುವಿನ ಭಗಿನಿ
ಮಾತೆ ನಮಿಪೆ ತವ | ಘಾತಕ ವ್ರಾತದ
ಭೀತೆಯ ತೋರದೆ | ಪ್ರೀತಿಯಿಂದೊಲಿದು || ೨ ||

ಲಕ್ಷ್ಮೀಕೃತಿ ಶಾಂತಿ ಅಕ್ಷರಳೆ ಜಯವಂತಿ
ಈಕ್ಷಣ ಕರುಣಕಟಾಕ್ಷದಿಂದೀಕ್ಷಿಸು
ಉಪೇಕ್ಷವ ಮಾಡದೆ ಮೋಕ್ಷದಾಯಕಳೆ || ೩ ||

ವಟದೆಲೆಯೊಳು ಮಲಗಿರುವ | ವಟುರೂಪಿ ಪತಿಪದವ
ಪಠಿಸುತಬ್ಜಸೀಕರ | ಪುಟದಿ ನಮಿಸುವಂಥ
ಕುಟಿಲರಹಿತೆ ಶತ | ತಟಿತ್ಸನ್ನಿಭಳೆ || ೪ ||

ಭಾಮೆ ಶ್ರೀ ಭೂಸುತೆಯೆ | ಶಾಮಸುಂದರ ಸತಿಯೆ
ನಾ ಮೊರೆ ಹೊಕ್ಕೆನು | ಪ್ರೇಮದಿಂದಲಿ | ಸು
ಕ್ಷೇಮಗರೆದು ಮಮಧಾಮದಿ ನೆಲಸೆ || ೫ ||