ಕೇಳಿರೈ ಶಿವಶರಣರು

ರಚನೆಕಾರ: ಕನಕದಾಸರು

ವರ್ಗ: ಉಪದೇಶಾತ್ಮಕ

ಕೇಳಿರೈ ಶಿವಶರಣರು ಹೇಳಲಂಜಿಕೆ ಆವುದು || ಪ ||

ಭಾಳನೇತ್ರನ ಭಕ್ತರಿಂತು ನೋಡಿಕೊಳ್ಳಿರೈ || ಅ.ಪ ||

ಮೂರುಲಿಂಗ ತನ್ನೊಳು ಮುಖ್ಯವಾಗಿರುವಾಗ
ಬೇರೊಂದು ಲಿಂಗ ಬೆಲೆ ಮಾಡಿ ತಂದು
ತೋರುವಂಗೈಲಿಟ್ಟು ತೋಯ ಪುಷ್ಪವ ನೀಡಿ
ಯಾರ ಮನಕೊಪ್ಪಿಸುವರೀ ಶೀಲವಂತರು || ೧ ||

ಲಿಂಗವೊಂದು ತನ್ನೊಳು ಲೀನವಾಗಿರುವಾಗ
ಅಂಗಭವಿಗಳು ಕೂಡಿ ಆಡಿಕೊಂಬರು
ಅಂಗದನುಭವದರ್ಥವನರಿಯದ ಇಂತಹ
ಭಂಗಿ ಹುಚ್ಚರೆಲ್ಲ ಶಿವನ ಭಕ್ತರಹರೆ || ೨ ||

ನಾಗಲಿಂಗ ತನ್ನೊಳು ನಾಟ್ಯವಾಡುತಲಿರಲು
ಆಗಮಿಸಿದ ಲಿಂಗವ ಬೆದಕಲೇತಕ್ಕೆ
ಕಾಗಿನೆಲೆಯಾದಿಕೇಶವನೆ ನಾಗಶಯನನಾಗಿರಲು
ಬೇರೊಂದನರಸಲೇತಕ್ಕೆ || ೩ ||