ಕೇಶವನೊಲುಮೆಯು ಆಗುವ ತನಕ

ರಚನೆಕಾರ: ಕನಕದಾಸರು

ವರ್ಗ: ಉಪದೇಶಾತ್ಮಕ

ಕೇಶವನೊಲುಮೆಯು ಆಗುವ ತನಕ ಹರಿ
ದಾಸರೊಳಿರುತಿರು ಹೇ ಮನುಜ || ಪ ||

ಕ್ಲೇಶಪಾಶಂಗಳ ಹರಿದು ವಿಲಾಸದಿ
ಶ್ರೀಶನ ನುತಿಗಳ ಪಾಡುತ ಮನದೊಳು || ಅ.ಪ ||

ಮೋಸದಿ ಜೀವರ ಘಾಸಿ ಮಾಡಿದ ಪಾಪ
ಕಾಶಿಗೆ ಹೋದರೆ ಹೋದೀತೆ
ಶ್ರೀಶನ ಭಕುತರ ದೂಷಿಸಿದ ಫಲ
ಕಾಸು ಕೊಟ್ಟರೆ ಬಿಟ್ಟೀತೆ
ಭಾಷೆಯ ಕೊಟ್ಟು ನಿರಾಶೆಯ ಗೈದ ಫಲ
ಕ್ಲೇಶವ ಗೊಳಿಸದೆ ಇದ್ದೀತೆ
ಭೂಸುರಸರ್ವಸ್ವವ ಹ್ರಾಸ ಮಾಡಿದ ಫಲ
ಏಸೇಸು ಜನುಮಕು ಬಿಟ್ಟೀತೆ || ೧ ||

ಜೀವನ ವಶದೊಳು ನಾನಾ ದ್ರವ್ಯವಿರೆ
ದಾನಧರ್ಮಕೆ ಮನಸಾದೀತೆ
ಹೀನ ಮನುಜನಿಗೆ ಜ್ಞಾನವ ಬೋಧಿಸೆ
ಹೀನ ವಿಷಯ ಅಳಿದ್ಹೋದೀತೆ
ಮಾನಿನಿ ಮನಸು ನಿಧಾನವಿರದಿರೆ
ಮಾನಾಭಿಮಾನಗಳು ಉಳಿದೀತೇ
ಭಾನುಪ್ರಕಾಶನ ಭಜನೆಯ ಮಾಡದ
ಹೀನಗೆ ಮುಕುತಿಯು ದೊರಕೀತೆ || ೨ ||

ಸತ್ಯಧರ್ಮಗಳ ನಿತ್ಯವೂ ಬೋಧಿಸೆ
ತೊತ್ತಿನ ಮನಸಿಗೆ ಸೊಗಸೀತೆ
ತತ್ತ್ವದ ಅರ್ಥವ ವಿಚಿತ್ರದಿ ಪೇಳೆ
ಕತ್ತೆಯ ಚಿತ್ತಕೆ ಹತ್ತೀತೆ
ಪುತ್ಥಳಿ ಬೊಂಬೆಯ ಚಿತ್ರದಿ ಬಣ್ಣಿಸಿ
ಮುತ್ತುಕೊಟ್ಟರೆ ಮಾತನಾಡೀತೆ
ಕತ್ತೂರಿ ತಿಲಕವನೊತ್ತಿ ಫಣೆಯೊಳಿಡೆ
ಆರ್ತಿಯ ತೋರದೆ ಇದ್ದೀತೆ || ೩ ||

ನ್ಯಾಯವ ಬಿಟ್ಟು ಅನ್ಯಾಯವ ಪೇಳಲು
ನಾಯಿಗೆ ನರಕವು ತಪ್ಪೀತೆ
ಬಾಯಿ ಕೊಬ್ಬಿನಲಿ ಬಯ್ಯುವ ಮನುಜಗೆ
ಘಾಯವಾಗದೆ ಬಿಟ್ಟೀತೆ
ತಾಯಿತಂದೆಗಳ ನೋಯಿಸಿದವನಿಗೆ
ಮಾಯದ ಮರಣವು ತಪ್ಪೀತೆ
ಮಾಯಾಜಾಲವ ಕಲಿತ ಮನುಜನಿಗೆ
ಕಾಯಕಷ್ಟವ ಬಿಟ್ಟೀತೆ || ೪ ||

ಸಾಧು ಸಜ್ಜನರ ನೋಯಿಸಿದ ಮಾಯಾ
ವಾದಿಗೆ ನರಕವು ತಪ್ಪೀತೆ
ಬಾಧಿಸಿ ಪರರರ್ಥವ ದೋಚುವವಗೆ
ವ್ಯಾಧಿಯು ಕಾಡದೆ ಬಿಟ್ಟೀತೆ
ಭೇದವೆಣಿಸಿ ಬಲು ಕ್ಷುದ್ರವ ಕಲಿತರೆ
ಮೋದವೆಂದಿಗು ಆದೀತೆ
ಕದ್ದು ಒಡಲ ಪೊರೆವವನ ಮನೆಯೊಳು
ಇದ್ದದ್ದು ಹೋಗದೆ ಉಳಿದೀತೆ || ೫ ||

ಅಂಗಜ ವಿಷಯಗಳನು ತೊರೆದಾತಗೆ
ಅಂಗನೆಯರ ಸುಖ ಸೊಗಸೀತೆ
ಸಂಗ ದುಃಖಗಳು ಹಿಂಗಿದ ಮನುಜಗೆ
ಶೃಂಗಾರದ ಬಗೆ ರುಚಿಸೀತೆ
ಇಂಗಿತವರಿತ ನಿಸ್ಸಂಗಿ ಶರೀರ ವ-
ಜ್ರಾಂಗಿಯಾಗದೆ ತಾನಿದ್ದೀತೆ
ಮಂಗಳ ಮಹಿಮನ ಅಂಘ್ರಿಯ ಕಾಣದ
ಮಂಗಗೆ ಮುಕುತಿಯು ದೊರಕೀತೆ || ೬ ||

ಕರುಣಾಮೃತದಾಭರಣವ ಧರಿಸಿದ
ಶರಣಗೆ ಸಿರಿಯು ತಪ್ಪೀತೆ
ಶರಣಪಾಶದುರವಣೆ ಹರಿದಾತಗೆ
ಶರಣರ ಕರುಣವು ತಪ್ಪೀತೆ
ಅರಿತು ಶಾಸ್ತ್ರವನಾಚರಿಪ ಯೋಗ್ಯಗೆ
ಗುರು ಉಪದೇಶವು ತಪ್ಪೀತೆ
ವರ ವೇಲಾಪುರದಾದಿಕೇಶವನ
ಸ್ಮರಿಸುವವನಿಗೆ ಮೋಕ್ಷ ತಪ್ಪೀತೆ || ೭ ||