ಕೊಕೊಕೋ ಎನ್ನಿರೊ

ರಚನೆಕಾರ: ಕನಕದಾಸರು

ವರ್ಗ: ಶ್ರೀಕೃಷ್ಣ

ಕೊಕೊಕೋ ಎನ್ನಿರೊ ಕುಂಭಿನಿಯವರೆಲ್ಲ
ಕೊಕೊಕೋ ಎನ್ನಿರೊ – ನಮ್ಮ || ಪ ||

ಗೋಕುಲದೊಳಗೊಬ್ಬ ಕಳ್ಳ ಬರುತಾನೆಂದು
ಕೊಕೊಕೋ ಎನ್ನಿರೊ || ಅ.ಪ. ||

ಹೊದ್ದಿ ಮೊಲೆಯನುಂಡವಳಸುವನೆ ಕೊಂದ
ಮುದ್ದುಗಾರ ಕಳ್ಳ ಕೊಕೊಕೋ ಎನ್ನಿರೊ || ೧ ||

ಕದ್ದುಕೊಂಡೊಯ್ವ ರಕ್ಕಸರನೆಲ್ಲರ ಕಾಲಲೊದ್ದೊರಸಿದ
ಕಳ್ಳ ಕೊಕೊಕೋ ಎನ್ನಿರೊ || ೨ ||

ಹದ್ದು ಹಗೆಯ ಹಾಸಿಗೆಯ ಮೇಲೊರಗಿದ
ಮುದ್ದುಗಾರ ಕಳ್ಳ ಕೊಕೊಕೋ ಎನ್ನಿರೊ || ೩ ||

ಅರ್ಧದೇಹನ ಕೈಯ ತಲೆಯ ಕಪಟದಿಂದ ಕದ್ದು ಬಿಸುಟ
ಕಳ್ಳ ಕೊಕೊಕೋ ಎನ್ನಿರೊ || ೪ ||

ಕೆಂಜಾಜಿಯ ಮಣಿ ಮಲ್ಲಿಗೆ ದಂಡೆಯ ರಂಜೆ ಕದ್ದ
ಕಳ್ಳ ಕೊಕೊಕೋ ಎನ್ನಿರೊ || ೫ ||

ಗುಂಜಿಯ ದಂಡೆಯ ಕಲ್ಲಿಯ ಚೀಲದ ಮಂಜು ಮೈಯ್ಯ
ಕಳ್ಳ ಕೊಕೊಕೋ ಎನ್ನಿರೊ || ೬ ||

ಅಂಜದೆ ಗೊಲ್ಲರ ಹಳ್ಳಿಯೊಳಗೆ ಹಾಲನೆಂಜಲಿಸಿದ
ಕಳ್ಳ ಕೊಕೊಕೋ ಎನ್ನಿರೊ || ೭ ||

ಸಂಜೆ ಬೈಗಿನಲ್ಲಿ ಕರೆಯುವ ಸತಿಯರ ಅಂಜಿಸಿದ
ಕಳ್ಳ ಕೊಕೊಕೋ ಎನ್ನಿರೊ || ೮ ||

ಕೇಸರಿ ಎಂಬ ರಕ್ಕಸರನೆಲ್ಲರ ಕೊಂದ ವೇಷಧಾರಿ
ಕಳ್ಳ ಕೊಕೊಕೋ ಎನ್ನಿರೊ || ೯ ||

ಮೋಸದಿ ಬಲಿಯ ದಾನವ ಬೇಡಿ ಅನುದಿನ ಬೇಸರಿಸಿದ
ಕಳ್ಳ ಕೊಕೊಕೋ ಎನ್ನಿರೊ || ೧೦ ||

ಮೀಸಲ ಅನ್ನವ ಕೂಸಾಗಿ ಸವಿದುಂಡ ವೇಷಧಾರಿ
ಕಳ್ಳ ಕೊಕೊಕೋ ಎನ್ನಿರೊ || ೧೧ ||

ಸಾಸಿರ ನಾಮಕ್ಕೆ ಹೆಸರಾದ ಚಪ್ಪನ್ನ ದೇಶದ ದಾರಿಗಳ್ಳ
ಕೊಕೊಕೋ ಎನ್ನಿರೊ || ೧೨ ||

ಆಕಳೊಳಾಡಿ ಪರಲೋಕಕೆ ನಡೆದಂಥ ಆಕೆವಾಳ
ಕಳ್ಳ ಕೊಕೊಕೋ ಎನ್ನಿರೊ || ೧೩ ||

ಭೂಕಾಂತೆಯ ಸೊಸೆಯರನೆತ್ತೆ ಬಲುಹಿಂದ ನೂಕಿ ತಂದ
ಕಳ್ಳ ಕೊಕೊಕೋ ಎನ್ನಿರೊ || ೧೪ ||

ಗೋಕುಲದೊಳು ಪುಟ್ಟಿ ಗೊಲ್ಲರೆಲ್ಲರ ಕೈಲಿ ಸಾಕಿಸಿಕೊಂಡ
ಕಳ್ಳ ಕೊಕೊಕೋ ಎನ್ನಿರೊ || ೧೫ ||

ಸಾಕಾರನಾಗಿ ಈ ಲೋಕವನೆಲ್ಲವ ಆಕ್ರಮಿಸಿದ
ಕಳ್ಳ ಕೊಕೊಕೋ ಎನ್ನಿರೊ || ೧೬ ||

ಕ್ಷೀರವಾರಿಧಿ ವೈಕುಂಠನಗರಿಯನು ಸೇರಿಸಿದ
ಕಳ್ಳ ಕೊಕೊಕೋ ಎನ್ನಿರೊ || ೧೭ ||

ದ್ವಾರಾವತಿಯನು ನೀರೊಳು ಬಚ್ಚಿಟ್ಟ ಊರುಗಳ್ಳ ಬಂದ
ಕೊಕೊಕೋ ಎನ್ನಿರೊ || ೧೮ ||

ದ್ವಾರಕೆಯಾಳುವ ಉಭಯದಾಸರ ತನ್ನ ಊರಿಗೊಯ್ದ
ಕಳ್ಳ ಕೊಕೊಕೋ ಎನ್ನಿರೊ || ೧೯ ||

ಕಾರಣಾತ್ಮಕ ಕಾಗಿನೆಲೆಯಾದಿಕೇಶವ ಕ್ಷೀರ ಬೆಣ್ಣೆಯ
ಕಳ್ಳ ಕೊಕೊಕೋ ಎನ್ನಿರೊ || ೨೦ ||